ಶಾಲೆಗಳ ಆರಂಭದ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಮಂಡ್ಯ

ಶಾಲೆಗಳ ಆರಂಭದ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ

August 22, 2021

ಮಂಡ್ಯ, ಆ.21(ಮೋಹನ್‍ರಾಜ್)- ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗ ದಂತೆ ವಿಶೇಷ ಕಾಳಜಿ ವಹಿಸಿ ಅಗತ್ಯ ಸಿದ್ಧೆತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 9 ಹಾಗೂ 10 ಭೌತಿಕ ತರಗತಿಗಳು ಆರಂಭ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪೂರ್ವ ಸಿದ್ಧತಾ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 2,529 ಶಾಲೆಗಳಿದ್ದು, ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕೋವಿಡ್ ಲಸಿಕೆ ನೀಡಬೇಕು. ಶಾಲೆಯನ್ನು ಆಗಾಗ್ಗೆ ಸ್ಯಾನಿಟೈಸ್ ಮಾಡಬೇಕು. ಎಲ್ಲರೂ ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಿಕ್ಷಕರು ಹಾಗೂ ಮಕ್ಕಳು ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು ಹಾಗೂ 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್‍ಶೀಲ್ಡ್ ಧರಿಸಬೇಕು ಎಂದು ತಿಳಿಸಿದರು.

ಶಿಕ್ಷಕರು ಶಾಲೆಗೆ ಬರುವ ಮುನ್ನ ಕಡ್ಡಾಯವಾಗಿ ಆರ್‍ಟಿಪಿ ಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ನೀಡಬೇಕು ಎಂದ ಸಚಿವರು, ಮಕ್ಕಳಿಗೆ ಆಹಾರ ತಯಾರಾಗುವ ಅಡುಗೆ ಮನೆ ಹಾಗೂ ದಾಸ್ತಾನು ಕೊಠಡಿಯನ್ನು ಸ್ವಚ್ಛಗೊಳಿಸು ವಂತೆ ಹಾಗೂ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದರೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮ ವಹಿಸಬೇಕು. ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಮಕ್ಕಳಿಗೆ ಹಾಗೂ ಪೋಷಕರಿಗೆ ಚಾಕ್ಲೇಟ್ ನೀಡಿ ಸ್ವಾಗತಿಸುವ ಮೂಲಕ ಅವರನ್ನು ಭಯದ ವಾತಾವರಣದಿಂದ ಹೊರತರಬೇಕು ಎಂದು ಸಚಿವರು ಸಲಹೆ ನೀಡಿದರು.

ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳಿಗೆ ಆಟೋಟಗಳಿಗೆ ಅವಕಾಶ ನೀಡಬೇಕು. ಇದರಿಂದ ಅವರ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಪ್ರತಿದಿನ ವಿದ್ಯಾರ್ಥಿಗಳು, ಶಿಕ್ಷಕರ ಆರೋಗ್ಯದ ಬಗ್ಗೆ ಮಾಹಿತಿ ದಾಖಲಿಸಬೇಕು ಎಂದು ಸಚಿವರು ಹೇಳಿದರು.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯದಂತೆಯೇ ನೈರ್ಮಲ್ಯ ಕಾಪಾಡುವುದು ಬಹಳ ಮುಖ್ಯ. ಶಾಲಾ-ಕಾಲೇಜು ಮುಂಭಾಗ ಯಾವುದೇ ತರಹದ ಐಸ್‍ಕ್ರೀಮ್ ಹಾಗೂ ಇತರೆ ಅಂಗಡಿಗಳು ಇರದಂತೆ ಪೆÇಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಕ್ಕಳ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ತದನಂತರ ಶಾಲಾ ಕಾಲೇಜುಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಸುರೇಶ್‍ಗೌಡ, ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಪಂ ಸಿಇಓ ದಿವ್ಯಪ್ರಭು, ಜಿಪಂ ಮುಖ್ಯ ಆಡಳಿತಾಧಿಕಾರಿ ಡಾ.ವಿರಾಮ್‍ಪ್ರಸಾತ್ ಮನೋಹರ್, ಆರೋಗ್ಯಾಧಿಕಾರಿ ಡಾ. ಧನಂಜಯ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Translate »