ಸಾಲ ಮರುಪಾವತಿಗೆ ಮತ್ತೆ ಮೂರು ತಿಂಗಳು ಕಾಲಾವಕಾಶ
ಮೈಸೂರು

ಸಾಲ ಮರುಪಾವತಿಗೆ ಮತ್ತೆ ಮೂರು ತಿಂಗಳು ಕಾಲಾವಕಾಶ

May 23, 2020

ಮುಂಬೈ,ಮೇ22- ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಸಾಲ ಮರುಪಾವತಿಗೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿದೆ.

ಈ ಮೊದಲು ಮಾರ್ಚ್ 1ರಿಂದ ಮೇ 31ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್‍ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್‍ಡೌನ್ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ. ಗೃಹ ಸಾಲ ಸೇರಿದಂತೆ ವಿವಿಧ ಸಾಲ ಪಡೆದು ಇಎಂಐ ಪಾವತಿಸುವವರಿಗೆ ಕೊಂಚ ಆರ್ಥಿಕ ಹೊರೆ ಸದ್ಯದ ಮಟ್ಟಿಗೆ ಇಳಿಕೆಯಾಗಲಿದೆ.

ಬಡ್ಡಿಗಿಲ್ಲ ವಿನಾಯ್ತಿ: ರಿಸರ್ವ್ ಬ್ಯಾಂಕ್ ಎಲ್ಲಾ ರೀತಿಯ ಸಾಲ ಗಳ ಮರುಪಾವತಿಯ 3 ತಿಂಗಳ ಕಂತುಗಳನ್ನು ಮುಂದೂ ಡಿದೆ. ಅದು ಇಎಂಐ ಪಾವತಿಗೆ ಮಾತ್ರ ನೀಡಲಾಗಿರುವ ಅವಧಿ ವಿಸ್ತರಣೆಯೇ ಹೊರತು ಬಡ್ಡಿ ದರಕ್ಕೆ ಅಲ್ಲ. ಈ 3 ತಿಂಗಳ ಅವಧಿಗೆ ಗ್ರಾಹಕರು ಬಡ್ಡಿ ಪಾವತಿಸಲೇಬೇಕಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಕೊರೊನಾ ವೈರಸ್ ಲಾಕ್‍ಡೌನ್ ಕಾರಣ ದಿಂದ ಆರ್ಥಿಕ ವಲಯದಲ್ಲಿ, ಹಣದುಬ್ಬರ ಅನಿಶ್ಚಿತತೆ ತಲೆದೋ ರಿದ್ದು ಭವಿಷ್ಯದಲ್ಲಿ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆರ್‍ಬಿಐ ಹಲವು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಹಣದ ನಿರ್ವಹಣೆ ಅತ್ಯಗತ್ಯವಾಗಿದೆ ಎಂದು ಶುಕ್ರವಾರ ಆರ್‍ಬಿಐ ಗವರ್ನರ್ ಶಕ್ತಿಕಾಂತ್‍ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆರ್ಥಿಕ ಸುಧಾರಣೆಗೆ ಮಾರುಕಟ್ಟೆಗಳ ಕಾರ್ಯಚಟುವಟಿಕೆಯನ್ನು ಸುಧಾರಿಸುವುದು, ರಫ್ತು ಮತ್ತು ಆಮದುಗಳನ್ನು ಬೆಂಬಲಿ ಸುವುದು, ಸಾಲ ಸೇವೆಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಒತ್ತಡವನ್ನು ಸರಾಗಗೊಳಿ ಸುವುದು ಮತ್ತು ಕಾರ್ಯನಿರತ ಬಂಡವಾಳಕ್ಕೆ ಉತ್ತಮ ಪ್ರವೇಶವನ್ನು ನೀಡಿ, ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಹಣಕಾಸಿನ ನಿರ್ಬಂಧಗಳನ್ನು ಸರಾಗಗೊಳಿಸುವುದು. ಹಣಕಾಸು ವ್ಯವಸ್ಥೆಯನ್ನು ಬೆಂಬಲಿಸಲು ವಿತ್ತೀಯ ನೀತಿಯನ್ನು ಸುಗಮಗೊಳಿಸಲು ಆರ್‍ಬಿಐ ಸಿದ್ದವಿದೆ ಎಂದ ಶಕ್ತಿಕಾಂತ್ ದಾಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆ ಕುಸಿತದ ಹಾದಿಯಲ್ಲಿಯೇ ಸಾಗುವ ನಿರೀಕ್ಷೆಯಿದೆ. ಇದಕ್ಕೆ ನಾವು ಸಿದ್ದರಾಗಿದ್ದೇವೆ ಎಂದರು. ಅಮೆರಿಕ ಡಾಲರ್ ಸ್ವಾಪ್ ಸೌಲಭ್ಯವನ್ನು ಪಡೆಯಲು ಆರ್‍ಬಿಐ ಎಕ್ಸಿಮ್ ಬ್ಯಾಂಕುಗಳಿಗೆ 15 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಇದು ಒಂದು ವರ್ಷದವರೆಗೆ ರೋಲ್‍ಓವರ್ ಸೌಲಭ್ಯವಾಗಿದೆ. 90 ದಿನಗಳ ಅವಧಿ ಸಾಲ ಸೌಲಭ್ಯಕ್ಕೆ ಆರ್‍ಬಿಐ 90 ದಿನಗಳ ವಿಸ್ತರಣೆ ನೀಡಿದೆ. ಒಂದು ಸಣ್ಣ ವೈರಸ್ ಹೇಗೆ ಜಗತ್ತಿನಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆ ಮೀರಿ ತೀರಾ ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದರು. ಕಚ್ಛಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್‍ನಲ್ಲಿ ಶೇ.8.6ಕ್ಕೆ ಹೆಚ್ಚಿದೆ ಎಂದು ತಿಳಿಸಿದರು. ಲಾಕ್ ಡೌನ್ ನಂತರ ಖಾಸಗಿ ಭೋಗದ ಪ್ರಮಾಣ ಕಡಿಮೆ ಆಗಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ ಎಂದು ಸಂಕಷ್ಟಗಳ ವಿವರ ನೀಡಿದರು.

Translate »