ಅಧಿವೇಶನ ಅಂತ್ಯ
News

ಅಧಿವೇಶನ ಅಂತ್ಯ

February 23, 2022

ಬೆಂಗಳೂರು, ಫೆ.22(ಕೆಎಂಶಿ)- ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿಯಿಂದಾಗಿ ವಿಧಾನಸಭೆ ಅಧಿವೇಶನ ಪೂರ್ವ ನಿಗದಿತ ಸಮಯ ಕ್ಕಿಂತ ಮೊದಲೇ ಮೊಟಕುಗೊಂಡಿತು.

ಕಾಂಗ್ರೆಸ್ ಸದಸ್ಯರು 6 ನೇ ದಿನವಾದ ಇಂದೂ ಕೂಡ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಕಲಾಪ ನಡೆಯಲು ಅವಕಾಶ ಮಾಡಿಕೊಡದ ಕಾರಣ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾರ್ಚ್ 4ಕ್ಕೆ ಸದನವನ್ನು ಮುಂದೂಡಿದರು. ಬೆಳಗ್ಗೆ ಸದನ ಸೇರುತ್ತಿದ್ದಂತೆ ಸಭಾಧ್ಯಕ್ಷರು, ಧರಣಿ ಹಿಂಪಡೆದು ಕಲಾಪ ನಡೆಸಲು ಅವಕಾಶ ಮಾಡಿಕೊಡಿ, ತಮ್ಮ-ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸದಸ್ಯರು ತುದಿಗಾಲಲ್ಲಿ ಇದ್ದಾರೆ. ಅವರ ಹಕ್ಕು ಮೊಟಕುಗೊಳಿಸುವುದು ಬೇಡ. ನಿಮ್ಮ ನಿರ್ಧಾರದಿಂದ ಹಿಂದೆ ಸರಿದು ಸದನ ನಡೆಸಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರು ಮಾಡಿದ ಮನವಿಗೆ ಕಾಂಗ್ರೆಸ್ ಸ್ಪಂದಿಸದಿದ್ದಾಗ, ಗದ್ದಲ, ಗಲಭೆ ನಡುವೆಯೇ ಪ್ರಶ್ನೋತ್ತರ ಅವಧಿ ಪೂರ್ಣ ಗೊಳಿಸಿ, ಕೆಲವು ಮಸೂದೆಗಳ ಮಂಡನೆಗೆ ಅವಕಾಶ ನೀಡಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣ ಯಕ್ಕೆ ಮುಖ್ಯಮಂತ್ರಿ ಅವರಿಂದ ಉತ್ತರ ಕೊಡಿಸಿ ನಂತರ ಸದನವನ್ನು ಮುಂದೂಡಿದರು.

ಕಳೆದ ಗುರು ವಾರದಿಂದ ಕಾಂಗ್ರೆಸ್ ಶಾಸಕರು ವಿಧಾನಸಭೆ ಯಲ್ಲಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡು ವಂತೆ ಅಥವಾ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು ಸಹ ಮುಂದು ವರೆಯಿತು. ರಾಷ್ಟ್ರಧ್ವಜಕ್ಕೆ ಸಚಿವ ಈಶ್ವರಪ್ಪ ಅವರು ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಸಂಪುಟದಿಂದ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸಭೆಯಲ್ಲಿ ನಿರಂತರವಾಗಿ ಧರಣಿ ಮಾಡುತ್ತಿದೆ. ಇಂದು ಬೆಳಗ್ಗೆಯೂ ಸದನ ಅರಂಭಗೊಂಡಾಗ ಕಾಂಗ್ರೆಸ್ ಸದಸ್ಯರು ಸಭಾ ಧ್ಯಕ್ಷರ ಮುಂದಿನ ಬಾವಿಗಿಳಿದು ಘೋಷಣೆ ಕೂಗುತ್ತಾ ಧರಣಿ ಮುಂದುವರೆಸಿದರು. ಆಗ ಸಭಾಧ್ಯಕ್ಷರು ಧರಣಿ ಕೈಬಿಟ್ಟು ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಸದನದ ಕಾರ್ಯ ಕಲಾಪ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಮನವಿಗೆ ಮಣಿಯದೆ ಘೋಷಣೆ ಕೂಗುತ್ತಾ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷರು ಪದೇ ಪದೆ ಮಾಡಿದ ಮನವಿಗೆ ಫಲ ನೀಡಲಿಲ್ಲ. ಧರಣಿ ಕೈ ಬಿಡುವಂತೆ ಸದನದ ಹೊರಗೂ ಸಹ ಸಭಾಧ್ಯಕ್ಷರು ಕಾಂಗ್ರೆಸಿಗರಿಗೆ ಮನವಿ ಮಾಡಿದ್ದರು. ಅದು ಸಹ ಫಲಿಸಲಿಲ್ಲ. ಇದರ ನಡುವೆ ಜೆಡಿಎಸ್ ಶಾಸಕರು ಧರಣಿ ನಿರತರನ್ನು ಅಮಾನತು ಮಾಡಿ ಹೊರಗೆ ಹಾಕಿ ಎಂದು ಆಗ್ರಹಿಸಿದರು. ಆದರೆ, ಈ ಎಲ್ಲದರ ನಡುವೆ ಧರಣಿ ಮುಂದುವರಿಯಿತು, ಸಭಾಧ್ಯಕ್ಷರು ಬೇರೆ ದಾರಿ ಕಾಣದೆ ಸದನವನ್ನು ಮುಂದೂಡಿದರು.

Translate »