ಮೃಗಾಲಯ, ಅರಮನೆ, ದೇಗುಲ ಪ್ರವೇಶ ನಿಷಿದ್ಧ ಏ.24-25, ಮೇ 1-2ರಂದು ಪ್ರವಾಸಿಗರಿಗೆ ಪ್ರವೇಶವಿಲ್ಲ
ಮೈಸೂರು

ಮೃಗಾಲಯ, ಅರಮನೆ, ದೇಗುಲ ಪ್ರವೇಶ ನಿಷಿದ್ಧ ಏ.24-25, ಮೇ 1-2ರಂದು ಪ್ರವಾಸಿಗರಿಗೆ ಪ್ರವೇಶವಿಲ್ಲ

April 24, 2021

ಮೈಸೂರು,ಏ.23(ಎಂಟಿವೈ)-ಕೊರೊನಾ 2ನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಘೋಷಿಸಿದ ಹಿನ್ನೆಲೆಯಲ್ಲಿ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ ಸೇರಿದಂತೆ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಶನಿವಾರ, ಭಾನುವಾರ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮೇ 23ರಿಂದ ಮೇ 4ರವರೆಗೆ ರಾಜ್ಯಾದ್ಯಂತ ಸೆಕ್ಷನ್ 144 ಜಾರಿ ಇರಲಿದೆ. ಜೊತೆಗೆ ಏ.24-25 ಹಾಗೂ ಮೇ 1-2ರಂದು ವಾರಾಂತ್ಯ ಕಫ್ರ್ಯೂ ಸಹ ಇರಲಿದೆ. ಶ್ರೀರಂಗಪಟ್ಟಣ ಬಳಿಯ ರಂಗನತಿಟ್ಟು ಪಕ್ಷಿಧಾಮಕ್ಕೂ ಪ್ರವೇಶ ನಿಷೇಧವಿದೆ.

ಸಫಾರಿ ಬಂದ್: ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಕೆ.ಗುಡಿ ಯಲ್ಲಿ ಅರಣ್ಯ ಇಲಾಖೆ, ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್(ಜೆಎಲ್‍ಆರ್) ವತಿಯಿಂದ ನಡೆಸುತ್ತಿದ್ದ ನಿತ್ಯದ ಸಫಾರಿ ಮೇಲೂ ವೀಕೆಂಡ್ ಕಫ್ರ್ಯೂ ಪರಿಣಾಮ ಬೀರಿದೆ. 3 ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರಿಗೂ ವಾರಾಂತ್ಯ ಕಫ್ರ್ಯೂ ನಿಯಮ ಪಾಲನೆ ಹಾಗೂ ಶನಿವಾರ, ಭಾನುವಾರ ಸಫಾರಿ ನಡೆಸದಂತೆ ನಿರ್ದೇಶನ ನೀಡಲಾಗಿದೆ. ಸಫಾರಿಗಾಗಿ ಮುಂಗಡ ಟಿಕೆಟ್ ಬುಕ್ ಮಾಡಿದವರಿಗೆ ಹಣ ಹಿಂದಿರುಗಿಸುವ ಅಥವಾ ಬೇರೆ ದಿನ ಅವಕಾಶ ನೀಡಲು ಯೋಜಿಸಲಾಗಿದೆ.

ದೇಗುಲದಲ್ಲೂ ಬಂದ್: ಕಳೆದೆರಡು ದಿನಗಳಿಂದ ಚಾಮುಂಡಿಬೆಟ್ಟದ ಚಾಮುಂ ಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಚಾಮರಾಜ ನಗರದ ಮಲೆ ಮಹಾದೇಶ್ವರ ದೇವಾಲಯ, ಬಿಳಿಗಿರಿರಂಗನಬೆಟ್ಟ, ಗೋಪಾಲಸ್ವಾಮಿ ಬೆಟ್ಟದ ದೇವಾಲಯಗಳಿಗೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಇದೀಗ ವೀಕೆಂಡ್ ಕಫ್ರ್ಯೂ ಧಾರ್ಮಿಕ ಕೇಂದ್ರಗಳಿಗೂ ಅನ್ವಯವಾಗಿರುವುದರಿಂದ ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ಈ ಭಾಗದ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೂ ಪ್ರಭಾವ ಬೀರಿದೆ.

 

Translate »