ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆಗೆ ಇಓ ಕರೆ
ಮಂಡ್ಯ

ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆಗೆ ಇಓ ಕರೆ

April 28, 2021

ಮಳವಳ್ಳಿ ಏ.27- ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬಹುದಾಗಿದ್ದು, ಸಾರ್ವಜನಿಕರು, ರೈತರು ಮತ್ತು ಕೂಲಿಕಾರರು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ಸತೀಶ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ರಥ ಪ್ರಚಾರ ವಾಹಿನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಸಬಹು ದಾದ ಕಾಮಗಾರಿಗಳನ್ನು ರಥದ ಮೂಲಕ ಪ್ರತಿಯೊಂದು ಹೋಬಳಿಗಳಿಗೂ ತೆರಳಿ ಪ್ರಚಾರ ನಡೆಸಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ಕೂಲಿಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಸೂಚಿಸಲಾಗಿದೆ. ಕೂಲಿಕಾರ್ಮಿಕರು ಕೆಲಸ ಮಾಡಲು ದೂರದ ಊರುಗಳಿಗೆ ಹೋಗು ತ್ತಿದ್ದು, ಗುಳೆ ತಡೆಯಲು ಉದ್ಯೋಗ ಖಾತರಿ ಯನ್ನು ಸಮರ್ಥವಾಗಿ ಬಳಸಿಕೊಳ್ಳ ಬೇಕಿದೆ. ಇದಕ್ಕಾಗಿ ವಾಹನಗಳ ಮೂಲಕ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ. ಸ್ತ್ರೀ, ಪುರುಷ ಎನ್ನುವ ಭೇದವಿಲ್ಲದೇ ಎಲ್ಲರಿಗೂ ಸಮಾನ ಕೂಲಿ ಕೊಡಲಾಗುತ್ತಿದೆ. ಜಾಬ್ ಕಾರ್ಡ್ ಇರುವ ಕೂಲಿಕಾರರು, ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು ಎಂದರು.

ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶ ದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂಯೋಜಕ ಸುನೀಲ್ ಕುಮಾರ್, ತಾಂತ್ರಿಕ ಸಂಯೋಜಕ ಸುಹಾಸ್, ತಾಂತ್ರಿಕ ಸಹಾಯಕರಾದ ಅರುಣ್, ನೀತಿನ್. ಮನು. ಸಾತ್ವಿಕ್ ಶೋಭ. ಅಖಿಲ್ ಸೇರಿದಂತೆ ಇತರರು ಇದ್ದರು.

Translate »