ಸರಗೂರಿನಲ್ಲಿ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರ ಸ್ಥಾಪನೆ
ಮೈಸೂರು

ಸರಗೂರಿನಲ್ಲಿ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರ ಸ್ಥಾಪನೆ

May 6, 2021

ಸರಗೂರು, ಮೇ 5(ನಾಗೇಶ್)-ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದಿನೇದಿನೆ ಕೊರೊನಾ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸಾವು-ನೋವು ಸಂಭವಿಸುವ ಮುನ್ನ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಮಿತ್ರ ಸಹಾಯವಾಣಿ ಕೇಂದ್ರ(ದೂ.08228-297240) ತೆರೆಯಲಾಗಿದೆ. ಉಸಿರಾಟ ಸಮಸ್ಯೆ ಅಥವಾ ಜ್ವರ ಸೇರಿದಂತೆ ಕೊರೊನಾ ಲಕ್ಷಣಗಳು ಕಂಡು ಬಂದು, ಆಸ್ಪತ್ರೆಗೆ ಬರಲು ಸಾಧ್ಯವಿಲ್ಲದಿದ್ದಾಗ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

ತುರ್ತು ಸೇವೆ ಅಗತ್ಯವಿದ್ದಲ್ಲಿ ಸ್ಥಳಕ್ಕೆ ಆಂಬುಲೆನ್ಸ್ ಕಳುಹಿಸಲಾಗುವುದು. ನಂತರ ಅವರಿಗೆ ತಪಾಸಣೆ ಮಾಡಲಾಗುವುದು. ಪಾಸಿಟಿವ್ ಇದ್ದ ಸಂದರ್ಭದಲ್ಲಿ ಅವರಿಗೆ ಔಷಧಿ ಕಿಟ್ ನೀಡಲಾಗುವುದು. ಅನುಕೂಲವಿರುವ ಸೋಂಕಿತರು ಮನೆಯಲ್ಲೇ ಸೆಲ್ಪ್ ಐಸೋಲೇಷನ್ ಆಗಬಹುದು. ಇದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಆದ್ದರಿಂದ ಪ್ರತಿ ಯೊಬ್ಬರೂ ಕೋವಿಡ್ ಸಹಾಯವಾಣಿ ಸಂಪರ್ಕಿಸಬಹುದು. ಬೆಳಗ್ಗೆ 9ರಿಂದ ಸಂಜೆ 6 ತನಕ ಈ ಸೇವೆ ಇದ್ದು, ಈ ಮಾಹಿತಿ ಇರುವವರು ನೆರೆಹೊರೆಯವರಿಗೂ ತಿಳಿಸಿದರೆ ಅನಾರೋಗ್ಯ ದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ ಎಂದರು. ಎಚ್.ಡಿ.ಕೋಟೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಉಮೇಶ್, ವೈದ್ಯಾಧಿಕಾರಿ ಪಾರ್ಥಸಾರಥಿ, ಪಟ್ಟಣ ಪಂಚಾಯಿತಿ ಸದಸ್ಯರಾದ ವೀರೇಶ್, ಎಸ್.ಎಲ್.ರಾಜಣ್ಣ, ಆರೋಗ್ಯಾ ಇಲಾಖೆ ಸಿಬ್ಬಂದಿ ಇದ್ದರು.

Translate »