ಕೈಯಲ್ಲಿ ಬ್ಯಾಗ್ ಹಿಡಿದು ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ಮಾಜಿ ಸೈನಿಕರು
ಮೈಸೂರು

ಕೈಯಲ್ಲಿ ಬ್ಯಾಗ್ ಹಿಡಿದು ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ಮಾಜಿ ಸೈನಿಕರು

January 4, 2021

ಮೈಸೂರು,ಜ.3(ಆರ್‍ಕೆಬಿ)-ದೇಶ ವ್ಯಾಪಿ ನಡೆಯುತ್ತಿರುವ ಸ್ವಚ್ಛ ಭಾರತ್ ಅಭಿಯಾನ ವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್ (ಮೈಸೂರು ಮಾಜಿ ಸೈನಿಕರ ಚಳವಳಿ)ನ ನೂರಾರು ಸದಸ್ಯರು ಭಾನುವಾರ ಮೈಸೂ ರಿನ ಚಾಮುಂಡಿಪಾದದ ಬಳಿಯಿಂದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದವರೆಗಿನ 1008 ಮೆಟ್ಟಿಲುಗಳು ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿ ಶ್ರಮದಾನ ನಡೆಸಿದರು. ಈ ವೇಳೆ 25ಕ್ಕೂ ಹೆಚ್ಚು ಚೀಲ ಗಳಷ್ಟು ಪ್ಲಾಸ್ಟಿಕ್ ಕಸ, ಬಾಟಲಿಗಳು ಮತ್ತು ಚಪ್ಪಲಿ ಇನ್ನಿತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ದರು. ಬೆಳ್ಳಂಬೆಳಿಗ್ಗೆ ವಿಕೇರ್ ಎಕ್ಸ್-ಸರ್ವಿಸ್ ಮೆನ್ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಮೈಸೂರು ಎಕ್ಸ್ -ಸರ್ವಿಸ್‍ಮೆನ್ ಮೂವ್‍ಮೆಂಟ್‍ನ ಗೌರವ ಸಲಹೆಗಾರ ಎಂ.ಎನ್.ಸುಬ್ರಮಣಿ ನೇತೃತ್ವದಲ್ಲಿ ಮಾಜಿ  ಸೈನಿಕರು ಮತ್ತು ಸೈನ್ಯಕ್ಕೆ ಆಯ್ಕೆಯಾಗಿರುವ 29 ಮಂದಿ ಯುವಕರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು, ದೊಡ್ಡ ಕ್ಯಾರಿ ಬ್ಯಾಗ್‍ಗಳೊಂ ದಿಗೆ ಶ್ರಮದಾನಕ್ಕಿಳಿದರು. ಬೆಟ್ಟದ ಮೆಟ್ಟಿಲುಗಳು ಮತ್ತು ಅಕ್ಕಪಕ್ಕ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಆಯ್ದು ಸ್ವಚ್ಛಗೊಳಿಸಿದರು. ಭಾನುವಾರವಾದ್ದರಿಂದ ಬೆಟ್ಟದ ಮೆಟ್ಟಿಲುಗಳನ್ನು ಹತ್ತಲು ಬಂದಿದ್ದ ಸಾರ್ವಜನಿಕರು ಸಹ ಇವರ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು.

ಸಮುದಾಯ ಸೇವೆ ಕೈಗೊಳ್ಳುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವುದು ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್‍ನ ಮುಖ್ಯ ಉದ್ದೇಶಗಳಲ್ಲಿ ಒಂದಾ ಗಿದ್ದು, ಇಂದಿನ ಶುಚಿಗೊಳಿಸುವ ಅಭಿಯಾನವು ಸಮುದಾಯ ಸೇವೆಯ ಒಂದು ಭಾಗವಾಗಿತ್ತು. ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಸಿ.ಎಲ್.ಅನಂದ್ ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವತಃ ಮಾಜಿ ಸೈನಿಕರಾಗಿರುವ ಅವರೊಂದಿಗೆ ಗ್ರೂಪ್ ಕ್ಯಾಪ್ಟನ್ (ನಿವೃತ್ತ) ಮಾಜಿ ಕಮಾಂಡಿಗ್ ಆಫೀಸರ್ ಮತ್ತು ಮೈಸೂರು ಏಪ್‍ಫೋರ್ಸ್ ಸೆಲೆಕ್ಷನ್ ಬೋರ್ಡ್‍ನ ಅಧ್ಯಕ್ಷರೂ ಆದ ಅಜಯ್ ಡುಡೇಜಾ, ಎನ್‍ಸಿಸಿ ಗ್ರೂಪ್ ಹೆಡ್ ಕ್ವಾಟ್ರಸ್‍ನ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಕರ್ನಲ್ ವಿ.ಶ್ರೀನಿವಾಸ್, ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್‍ನ ಅಧ್ಯಕ್ಷ ಪ್ರಿನ್ಸ್, ಕಾರ್ಯದರ್ಶಿ ಸಿ.ಎಂ.ಶ್ರೀಧರ್, ಪೋಷಕರಾದ ವಿ.ಮಹೇಶ್ ಇನ್ನಿತರರು ಅಭಿಯಾನದ ಮುಂಚೂಣಿಯಲ್ಲಿದ್ದರು.
ಸ್ವಚ್ಛತಾ ಅಭಿಯಾನಕ್ಕೂ ಮೊದಲು ಮಾತನಾಡಿದ ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ, ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್‍ನ ಕಾರ್ಯವನ್ನು ಶ್ಲಾಘಿಸಿದರು. ಅನೇಕ ನಿವೃತ್ತ ರಕ್ಷಣಾ ಸಿಬ್ಬಂದಿಗಳು ರಾಷ್ಟ್ರ ಸೇವೆಯಲ್ಲಿ ವóರ್ಷಗಳ ನಂತರ ಮುಖ್ಯವಾಹಿನಿಯ ಸಮಾಜಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದೆ. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಅನೇಕ ಕಲ್ಯಾಣ ಸಂಸ್ಥೆಗಳು ಮತ್ತು ಚಳುವಳಿಗಳು ಇದ್ದರೂ ಒಂದು ಧ್ವನಿ ಎತ್ತಲಾಗುತ್ತಿಲ್ಲ. ಹೀಗಾಗಿ ಸಂಘಟನೆ ಮೂಲಕ ಧ್ವನಿ ಎತ್ತುವ ಅವಶ್ಯವಿದೆ ಎಂದು ಹೇಳಿದರು. ಸೈನ್ಯದಲ್ಲಿ ತಮ್ಮ ಮಕ್ಕಳನ್ನು ತರುವ ನಿಟ್ಟಿನಲ್ಲಿ ಅವರಿಗೆ ಶಿಕ್ಷಣ ನೀಡಬೇಕು. ಶಿಸ್ತುಬದ್ಧ ಜೀವನದೊಂದಿಗೆ ದೇಶ ರಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಭಾಗವಹಿಸುವಂತೆ ಮಾಡುವುದು ಅಗತ್ಯ ಎಂದು ತಿಳಿಸಿದರು.

ಮೈಸೂರಲ್ಲಿ `ಯುದ್ಧ ಸ್ಮಾರಕ’ವಿಲ್ಲ
ಮೈಸೂರು ಎಕ್ಸ್-ಸರ್ವಿಸ್‍ಮೆನ್ ಮೂವ್‍ಮೆಂಟ್‍ನ ಗೌರವ ಸಲಹೆಗಾರ ಮಂಡೆಟ್ಟಿರ ಎನ್.ಸುಬ್ರಮಣಿ ಮಾತನಾಡಿ, ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣವಾಗಬೇಕು. ಹಾಗಾಗಿ ಪ್ರಸ್ತಾವನೆ ಸಲ್ಲಿಸಿ, ಕಳೆದ 20 ವರ್ಷಗಳಿಂದ ತಾವು ಪ್ರಯತ್ನ ನಡೆಸಿದ್ದು, ಅಂದಿನ ಜಿಲ್ಲಾಧಿಕಾರಿಗಳು ಪೆರೇಡ್ ಮೈದಾನ ದಲ್ಲಿ ನಿವೇಶನವನ್ನು ಗುರುತು ಮಾಡಿದ್ದರು. 2 ದಶಕಗಳ ಹೋರಾಟದ ಹೊರತಾಗಿಯೂ ಇನ್ನೂ ಯುದ್ಧ ಸ್ಮಾರಕ ಕಾರ್ಯ ರೂಪಕ್ಕೆ ಬರಲಿಲ್ಲ ಎಂದು ಬೇಸರದಿಂದ ನುಡಿದರು.

ಮಾಜಿ ಸೈನಿಕರಾದ ಹಾಲಿ ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ ಅವರು ಮೈಸೂರು ಉಪ ವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ 5 ವರ್ಷದ ಹಿಂದೆ ಈ ಕಾರ್ಯಕ್ಕೆ ಚಾಲನೆ ನೀಡಿದ್ದರ ಪರಿಣಾಮ 1.44 ಕೋಟಿ ರೂ. ಅನುದಾನ ಮಂಜೂರಾಯಿತು. ಅದರ ಚಿಕ್ಕದೊಂದು ಮಾದರಿಯನ್ನು ಮಾಡಿದ್ದರು. ನಂತರ ಅದು ಮುಂದುವರಿ ಯದೆ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.

ಈಗ ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರು ಮೈಸೂರಿ ನಲ್ಲಿ ನೆಲೆಸಿದ್ದಾರೆ. ಮೈಸೂರಿನಲ್ಲಿ ನೆನೆಗುದಿಗೆ ಬಿದ್ದಿರುವ ಯುದ್ಧ ಸ್ಮಾರಕದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೈನ್ಯದ ಮುಖ್ಯ ಕಚೇರಿ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ತರುವಂತೆ ಅವರ ನೆರವು ಕೇಳಲಿದ್ದೇವೆ. ಆದಷ್ಟು ಶೀಘ್ರ ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣವಾಗಿ ಮೈಸೂರು ಸೈನ್ಯದ ಕೇಂದ್ರ ಎಂಬುದನ್ನು ಸಾಬೀತುಪಡಿಸಬೇಕಾಗಿದೆ ಎಂದು ತಿಳಿಸಿದರು.

Translate »