ವಿವಿಧ ಲೋಹದ ಆಕರ್ಷಕ ಆಭರಣ ಮಾದರಿಗಳ ಪ್ರದರ್ಶನ
ಮೈಸೂರು

ವಿವಿಧ ಲೋಹದ ಆಕರ್ಷಕ ಆಭರಣ ಮಾದರಿಗಳ ಪ್ರದರ್ಶನ

June 5, 2018

ಮೈಸೂರು:  ಹೆಣ್ಣಿನ ಚೆಲುವನ್ನು ದ್ವಿಗುಣಗೊಳಿಸುವ ಬಗೆ ಬಗೆಯ ಆಭರಣಗಳು ಗಂಡಿನ ಪ್ರತಿಷ್ಠೆಯ ಸಂಕೇತವೂ ಹೌದು. ಅನಾದಿ ಕಾಲದಿಂದಲೂ ಮಾನವನ ಅಲಂಕಾರಿಕ ವಸ್ತುಗಳ ಸಾಲಿನಲ್ಲಿ ಚಿನ್ನಾಭರಣ ಅಗ್ರಸ್ಥಾನ ಪಡೆದುಕೊಂಡಿವೆ. ಇದೀಗ ಚಿನ್ನದ ಒಡವೆಗಳಿಗೂ ಸೆಡ್ಡು ಹೊಡೆಯುವ ವಿವಿಧ ಲೋಹಗಳ ಆಭರಣಗಳು ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿವೆ.

ಬೆಳ್ಳಿ, ಕಂಚು ಹಾಗೂ ತಾಮ್ರ ಸೇರಿದಂತೆ ಹಲವು ಲೋಹಗಳ ಆಭರಣಗಳು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಇಂತಹ ಲೋಹದ ಒಡವೆಗಳ ವಿನ್ಯಾಸದಲ್ಲಿ ವಿಶೇಷ ಪ್ರತಿಭೆಗಳು ತಮ್ಮ ಕೌಶಲ್ಯ ಮೆರೆದಿದ್ದಾರೆ. ಈ ಬಗೆಯ ಕೌಶಲ್ಯದಿಂದ ಅರಳಿರುವ ಆಭರಣಗಳನ್ನು ವೀಕ್ಷಿಸಲು ಮೈಸೂರಿನ ಜೆಎಸ್‍ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಆವರಣಕ್ಕೆ ಭೇಟಿ ನೀಡಿದರೆ ಸಾಕು.

ಇಲ್ಲಿನ ಜ್ಯುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು (ವಿಶೇಷಚೇತನರು) ತಯಾರಿಸಲ್ಪಟ್ಟ ಆಭರಣಗಳ ಮಾದರಿಗಳ ಪ್ರದರ್ಶನದಲ್ಲಿ ಕಿವಿಯೊಲೆ, ಕತ್ತಿನ ಸರ, ಬೈತಲೆ ಬಟ್ಟು, ಉಂಗುರ ಸೇರಿದಂತೆ ಹಲವು ಒಡವೆಗಳು ಕಣ್ಮನ ಸೆಳೆಯುತ್ತಿವೆ. 10 ಮಂದಿ ವಿಶೇಷ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಆರು ಸೆಮಿಸ್ಟರ್‍ಗಳ ನಿಯೋಜಿತ ಪ್ರಾಯೋಗಿಕ ಕಾರ್ಯದಲ್ಲಿ ಹಲವಾರು ಆಭರಣಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದಾರೆ.

ಪ್ರದರ್ಶನದಲ್ಲಿರುವ ನೂರಾರು ಆಭರಣಗಳು ಒಂದಕ್ಕಿಂತ ಒಂದು ಕಣ್ಮನ ಸೆಳೆಯುತ್ತಿವೆ. ಪ್ರತಿ ಸೆಮಿಸ್ಟರ್‍ನಲ್ಲಿ ಪ್ರತಿಯೊಬ್ಬರು ಕನಿಷ್ಠ 5 ಒಡವೆಗಳ ಮಾದರಿ ಸಿದ್ಧಪಡಿಸಲು ನಿರ್ದೇಶನವಿದ್ದು, ಅದರಂತೆ ವಿಶೇಷ ಪ್ರತಿಭೆಗಳು ತಮ್ಮ ವಿಶಿಷ್ಟ ಕಲಾಕೌಶಲ್ಯದಿಂದ ಅರಳಿಸಿರುವ ಆಭರಣಗಳು ಮಾನಿನಿಯರ ಮನ ಗೆಲ್ಲಲು ಕಾದು ನಿಂತಿವೆ. ವಿಶೇಷಚೇತನರು ಉದ್ಯೋಗ ಪಡೆಯುವ ವೇಳೆ ಹಾಜರುಪಡಿಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ತಾವು ವಿನ್ಯಾಸಗೊಳಿಸಿ ಸಿದ್ಧಪಡಿಸಿರುವ ಒಡವೆ ಮಾದರಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ.

ಸೋಮವಾರ ಬೆಳಿಗ್ಗೆ ಆಭರಣ ಮಾದರಿಗಳ ಪ್ರದರ್ಶನಕ್ಕೆ ತೊಳಸಿ ಜ್ಯುವೆಲರಿಯ ವ್ಯವಸ್ಥಾಪಕ ಪಾಲುದಾರ ಟಿ.ಎ.ಹರ್ಷನಂದನ ಚಾಲನೆ ನೀಡಿದರು. ಈ ವೇಳೆ ಪ್ರಾಂಶುಪಾಲ ನಂಜುಂಡಸ್ವಾಮಿ, ವಿಭಾಗದ ಮುಖ್ಯಸ್ಥ ಎನ್.ಎಂ.ಶಿವಕುಮಾರಸ್ವಾಮಿ, ಉಪನ್ಯಾಸಕ ರಘು, ಆಭರಣ ವಿನ್ಯಾಸಕಿ ಸೌಮ್ಯ ಮತ್ತಿತರರು ಹಾಜರಿದ್ದರು. ವಸ್ತು ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಜೂ.5ರವರೆಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಭೇಟಿ ನೀಡಲು ಅವಕಾಶವಿದೆ.

Translate »