ಮೈಸೂರು, ಜೂ.30(ಎಂಟಿವೈ)- ಮೈಸೂರಿನ ಸಂತೆ ಪೇಟೆ, ಶಿವರಾಂಪೇಟೆ, ಚಿಕ್ಕ ಗಡಿಯಾರ ಬಳಿ ಬುಧ ವಾರ ಬೆಳಗ್ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿ ದರು. ಅದೇ ವೇಳೆ ಅಂಗಡಿಗಳಲ್ಲಿ ಪದಾರ್ಥಗಳನ್ನೂ ಪರಿಶೀಲಿಸಿ ಅವಧಿ ಮುಗಿದ ತಿನಿಸು ಮಾರುತ್ತಿದ್ದ ಅಂಗಡಿ ಮಾಲೀಕನಿಗೂ ದಂಡ ವಿಧಿಸಿದರು.
ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ವಿನಾಯಿತಿ ನೀಡಿ, ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಪರಿಣಾಮ ನಗರ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚಾಗಿದೆ.
ಹಾಗಾಗಿ, ಕೊರೊನಾ ಮಾರ್ಗಸೂಚಿಗಳ ಉಲ್ಲಂ ಘನೆಯಾಗದಂತೆ ಜನಜಾಗೃತಿ ಮೂಡಿಸಲು ಇಂದು ಬೆಳಗ್ಗೆ ಪಾಲಿಕೆ ವಲಯ ಕಚೇರಿ-6ರ ಎಸಿ ಕಾರ್ತಿಕ್, ಪರಿಸರ ಅಭಿಯಂತರರಾದ ಎಸ್.ಮೈತ್ರಿ, ಹೆಲ್ತ್ ಇನ್ ಸ್ಪೆಕ್ಟರ್ ರಾಜೇಶ್ವರಿ ಹಾಗೂ ಅಭಯ ತಂಡದ ಸದ ಸ್ಯರು ಸಂತೆಪೇಟೆ, ಶಿವರಾಂಪೇಟೆ, ಚಿಕ್ಕ ಗಡಿಯಾರ ಸುತ್ತಮುತ್ತ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಮಾಸ್ಕ್ ಹಾಕದೆ ವಹಿವಾಟು ಮಾಡುತ್ತಿದ್ದ ಕೆಲವು ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿದರು.
ಸಾರ್ವಜನಿಕರ ದೂರಿನ ಮೇರೆಗೆ ಸಂತೆಪೇಟೆಯ ಡಿ.ಡಿ.ಎಂಟರ್‍ಪ್ರೈಸಸ್ ಮಳಿಗೆ ಪರಿಶೀಲಿಸಿದ ನಗರ ಪಾಲಿಕೆ ಅಧಿಕಾರಿಗಳ ತಂಡಕ್ಕೆ ಅವಧಿ ಮೀರಿದ ತಿನಿಸು ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ಮಾರಾಟಕ್ಕಿಡಲಾಗಿದ್ದ ಚಿಪ್ಸ್, ಕೋಡು ಬಳೆ, ಚಕ್ಕುಲಿ, ಮಿಠಾಯಿ ಮೊದಲಾದ ತಿನಿಸುಗಳ ಪ್ಯಾಕ್ ಮೇಲೆ ಪದಾರ್ಥ ತಯಾರಾದ ಹಾಗೂ ಅವಧಿ ಮುಗಿಯುವ ದಿನಾಂಕ ಪರಿಶೀಲಿಸಿದಾಗ ಅವೆಲ್ಲವಕ್ಕೂ ಬಳಕೆ ಅವಧಿ ಮುಗಿದಿರುವುದು ಕಂಡುಬಂದಿತು.
ಎಣ್ಣೆಯಲ್ಲಿ ಕರಿದ ತಿನಿಸು ಅವಧಿ ಮುಗಿದಿದ್ದರೆ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂಬುದನ್ನು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಿಕೊಟ್ಟ ನಗರ ಪಾಲಿಕೆ ತಂಡ, ಅಂಗಡಿ ಮಾಲೀಕನಿಗೆ 2 ಸಾವಿರ ರೂ. ದಂಡ ವಿಧಿಸಿ ಅವಧಿ ಮೀರಿದ ತಿನಿಸನ್ನು ವಶಕ್ಕೆ ಪಡೆಯಿತು. ಇಂದಿನ ಕಾರ್ಯಾಚರಣೆ ವೇಳೆ ಮಾಸ್ಕ್ ಧರಿಸದವರಿಂದ 800 ರೂ. ಸೇರಿದಂತೆ 2800 ರೂ. ದಂಡ ವಸೂಲಿ ಮಾಡಿತು. ಗ್ರಾಹಕರಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಜಾಗೃತಿ ಮೂಡಿಸಿದರು.