ಸುಳ್ಳು ಸುದ್ದಿ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆ ಕೋರಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್
ಮೈಸೂರು

ಸುಳ್ಳು ಸುದ್ದಿ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆ ಕೋರಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್

April 24, 2021

ನವದೆಹಲಿ,ಏ.23-ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಕುರಿತ ಸುಳ್ಳುಸುದ್ದಿ ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕ್ಷಮೆ ಯಾಚಿಸಿದ್ದಾರೆ.

ಈ ಮಧ್ಯೆ, ಸುಮಿತ್ರಾ ಮಹಾಜನ್ ಅವರ ಪುತ್ರ ಮಂದಾರ್ ಅವರು ಶುಕ್ರವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ, `ಅಮ್ಮ ಆರೋಗ್ಯ ದಿಂದಿದ್ದಾರೆ. ಅವರ ಕುರಿತ ವದಂತಿಗಳಿಗೆ ಪ್ರತಿ ಕ್ರಿಯಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

3`ಸುಮಿತ್ರಾ ಮಹಾಜನ್ ಜೀ ಅವರ ಮಗನ ಜತೆ ಇಂದು (ಶುಕ್ರವಾರ) ಮಾತನಾಡಿದೆ. ಗುರುವಾರ ರಾತ್ರಿ ಸುಳ್ಳು ಮಾಹಿತಿಯನ್ನು ಆಧರಿಸಿ ಟ್ವೀಟ್ ಮಾಡಿ ದ್ದಕ್ಕಾಗಿ ಅವರ ಕ್ಷಮೆ ಕೋರಿದೆ. ಅವರಿಗೆ ವಿಷಯ ಅರ್ಥ ವಾಯಿತು. ಅಲ್ಲದೆ ನನ್ನ ಬಗ್ಗೆ ಕೃಪಾದೃಷ್ಟಿ ಹೊಂದಿದ್ದಾರೆ. ಮುಖ್ಯವಾಗಿ ಸುಮಿತ್ರಾ ಮಹಾಜನ್ ಚೆನ್ನಾಗಿದ್ದಾರೆ ಎಂದು ತಿಳಿದು ಬಹಳ ಸಂತಸವಾಗಿದೆ. ಅವರಿಗೆ ಮತ್ತು ಕುಟುಂಬದವರಿಗೆ ಶುಭ ಹಾರೈಕೆ ತಿಳಿಸಿದ್ದೇನೆ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

`ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ. ಅದಕ್ಕಾಗಿ ಸಂತಾಪ ವ್ಯಕ್ತಪಡಿಸುವೆ’ ಎಂದು ಶಶಿ ತರೂರ್ ಗುರುವಾರ ರಾತ್ರಿ ಟ್ವೀಟ್ ಮಾಡಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಬಿಜೆಪಿ ನಾಯಕ ಕೈಲಾಸ್ ವಿಜಯವರ್ಗೀಯ ಅವರು, `ಸುಮಿತ್ರಾ ಮಹಾಜನ್ ಆರೋಗ್ಯದಿಂದ ಇದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ತಕ್ಷಣ ಎಚ್ಚೆತ್ತು ಕೊಂಡ ತರೂರ್ ಟ್ವೀಟ್ ಅಳಿಸಿ ಹಾಕಿ, ಕ್ಷಮೆ ಕೋರಿದ್ದಾರೆ.

ಅಲ್ಲದೇ, `ಕೈಲಾಸ್ ವಿಜಯವರ್ಗೀಯ ಅವರಿಗೆ ಧನ್ಯವಾದ. ನಾನು ಟ್ವೀಟ್ ಅಳಿಸಿದ್ದೇನೆ. ಅಂಥ ಸುಳ್ಳು ಸುದ್ದಿ ಸೃಷ್ಟಿಸಲು ಮತ್ತು ಹರಡಲು ಜನ ಯಾಕೆ ಪ್ರಚೋದನೆಗೊಳ್ಳುತ್ತಾರೆ ಎಂದು ಅಚ್ಚರಿಯಾಗುತ್ತಿದೆ. ಸುಮಿತ್ರಾ ಅವರು ಆರೋಗ್ಯಯುತ ಸುದೀರ್ಘ ಜೀವನ ನಡೆಸಲಿ, ಶುಭ ಹಾರೈಕೆಗಳು’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

`ಸುಮಿತ್ರಾ ಮಹಾಜನ್ ಅವರು ಚೆನ್ನಾಗಿದ್ದಾರೆಂದು ತಿಳಿದು ನಿರಾಳ ವಾಗಿದ್ದೇನೆ. ನನಗೆ ದೊರೆತ ಮಾಹಿತಿ ವಿಶ್ವಾಸಾರ್ಹ ಮೂಲ ದ್ದೆಂದು ತಿಳಿದುಕೊಂಡಿದ್ದೆ. ಅಂತಹ ಸುದ್ದಿಗಳನ್ನು ಹರಡುವ ಬಗ್ಗೆ ದಿಗಿಲುಗೊಂಡಿದ್ದೇನೆ’ ಎಂದು ಅವರು ಮತ್ತೊಂದು ಟ್ವೀಟ್‍ನಲ್ಲಿ ಉಲ್ಲೇ ಖಿಸಿದ್ದಾರೆ. 78 ವರ್ಷದ ಸುಮಿತ್ರಾ ಮಹಾಜನ್, ಮಧ್ಯಪ್ರದೇ ಶದ ಇಂದೋರ್ ಕ್ಷೇತ್ರವನ್ನು 1989ರಿಂದ 2019ರವರೆಗೆ ಪ್ರತಿನಿಧಿಸಿದ್ದರು. ಹೆಚ್ಚುಕಾಲ ಸೇವೆ ಸಲ್ಲಿಸಿದ ಮಹಿಳಾ ಸಂಸದೆ ಎಂಬ ಕೀರ್ತಿಗೂ ಭಾಜನ ರಾಗಿದ್ದಾರೆ. 2014-19ರ ಅವಧಿಯಲ್ಲಿ ಲೋಕಸಭೆ ಸ್ಪೀಕರ್ ಆಗಿದ್ದರು.

ಸ್ಪಷ್ಟೀಕರಣ
ಮೈಸೂರು, ಏ.23- ದೆಹಲಿ ಸುದ್ದಿ ಮೂಲಗಳು ಮತ್ತು ಕೆಲ ಸುದ್ದಿವಾಹಿನಿಗಳ ಮಾಹಿತಿ ಆಧರಿಸಿ, `ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಇನ್ನಿಲ್ಲ’ ಎಂಬ ಶೀರ್ಷಿಕೆಯಡಿ `ಮೈಸೂರು ಮಿತ್ರ’ ಪತ್ರಿಕೆಯ ಶುಕ್ರವಾರದ (ಏ.23) ಸಂಚಿಕೆ ಯಲ್ಲಿ ತಪ್ಪು ವರದಿ ಪ್ರಕಟವಾಗಿದ್ದು, ಅದಕ್ಕಾಗಿ ವಿಷಾದಿಸುತ್ತೇವೆ.
ಸುಮಿತ್ರ ಮಹಾಜನ್ ಅವರು ಸದ್ಯ ಆರೋಗ್ಯದಿಂದಿದ್ದಾರೆ ಎಂದು ಅವರ ಕುಟುಂಬವೇ ಸ್ಪಷ್ಟಪಡಿಸಿದೆ. ಸುಮಿತ್ರಾ ಅವರ ಪುತ್ರ ಮಂದಾರ್ ಶುಕ್ರವಾರ ವಿಡಿಯೊ ಬಿಡುಗಡೆ ಮಾಡಿ, `ಅಮ್ಮ ಆರೋಗ್ಯದಿಂದಿದ್ದಾರೆ. ಅವರ ಕುರಿತ ವದಂತಿಗಳಿಗೆ ಪ್ರತಿಕ್ರಿಯಿಸಬೇಡಿ’ ಎಂದಿದ್ದಾರೆ. ಈ ಮಧ್ಯೆ ಸುಮಿತ್ರ ಮಹಾಜನ್ ಅವರೇ ಖಚಿತಪಡಿಸಿಕೊಳ್ಳದೆ ವರದಿ ಮಾಡುವ ಜರೂರತ್ ಏನಿತ್ತು ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
-ಸಂಪಾದಕ

Translate »