ಉಕ್ರೇನ್‍ನಿಂದ ಬಂದ ನವೀನ್ ಪಾರ್ಥಿವ ಶರೀರಕ್ಕೆ ಕುಟುಂಬದ ಅಂತಿಮ ಧಾರ್ಮಿಕ ವಿಧಿ ವಿಧಾನ: ದಾವಣಗೆರೆ ಮೆಡಿಕಲ್ ಕಾಲೇಜಿಗೆ ದೇಹದಾನ
News

ಉಕ್ರೇನ್‍ನಿಂದ ಬಂದ ನವೀನ್ ಪಾರ್ಥಿವ ಶರೀರಕ್ಕೆ ಕುಟುಂಬದ ಅಂತಿಮ ಧಾರ್ಮಿಕ ವಿಧಿ ವಿಧಾನ: ದಾವಣಗೆರೆ ಮೆಡಿಕಲ್ ಕಾಲೇಜಿಗೆ ದೇಹದಾನ

March 22, 2022

ಉಕ್ರೇನ್‍ನಿಂದ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರವನ್ನು ಸೋಮವಾರ ಚಳಗೇರಿಗೆ ತರಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗಣ್ಯರು ಅಂತಿಮ ದರ್ಶನ ಪಡೆದರು.

ಹಾವೇರಿ, ಮಾ.21- ಉಕ್ರೇನ್ ಮೇಲೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ಸ್ವಗ್ರಾಮ ಚಳಗೇರಿಗೆ ತರಲಾಯಿತು.

ಮಾ.1 ರಂದು ಕೀವ್ ನಗರದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರÀ ಸೋಮವಾರ ಮುಂಜಾನೆ 3 ಗಂಟೆ ಸುಮಾರಿನಲ್ಲಿ ದುಬೈನಿಂದ ಎಮಿರೇಟ್ಸ್ ಇಕೆ-568 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ನವೀನ್ ಮೃತದೇಹಕ್ಕೆ ಅಂತಿಮ ಗೌರವ ಸಲ್ಲಿಸಿದ ನಂತರ ಆತನ ಕುಟುಂಬಸ್ಥರಿಗೆ ಮೃತದೇಹ ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು ಹಸ್ತಾಂತರಿಸಿದರು.

ನಂತರ ಪೊಲೀಸ್ ಬಂದೋಬಸ್ತ್‍ನಲ್ಲಿ ಆಂಬುಲೆನ್ಸ್‍ನಲ್ಲಿ ನವೀನ್ ಮೃತದೇಹವನ್ನು ಸ್ವಗ್ರಾಮ ಚಳಗೇರಿಗೆ ಕೊಂಡೊಯ್ಯ ಲಾಯಿತು. ಆತನ ತಂದೆ ಶೇಖರಪ್ಪ ಗ್ಯಾನಗೌಡರ್, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಗ್ಯಾನಗೌಡರ್ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊನೆಯದಾಗಿ ಮಗನನ್ನು ಕಣ್ತುಂಬಿಕೊಂಡ ತಾಯಿ ಪುತ್ರನ ಹಣೆಗೆ ಮುತ್ತಿಟ್ಟು ಕಂಬನಿ ಸುರಿಸಿದರು. ವಿಭೂತಿ ಕುಂಕುಮ ಹಚ್ಚಿ, ಬಿಲ್ವಪತ್ರೆ ಇಟ್ಟು ಹಾರ ಹಾಕಿ ಅಂತಿಮ ನಮನ ಸಲ್ಲಿಸಿದರು.

ಮಧ್ಯಾಹ್ನದವರೆಗೂ ನವೀನ್ ಮೃತದೇಹ ಚಳಗೇರಿ ಗ್ರಾಮದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಚಳಗೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಆತನ ಶಾಲಾ-ಕಾಲೇಜು ಸಹಪಾಠಿಗಳು, ಉಕ್ರೇನ್‍ನಿಂದ ವಾಪಾಸ್ಸಾಗಿರುವ ಕೆಲ ವೈದ್ಯಕೀಯ ವಿದ್ಯಾರ್ಥಿಗಳು ನವೀನ್ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಳಗೇರಿ ಗ್ರಾಮಕ್ಕೂ ಆಗಮಿಸಿ ನವೀನ್‍ಗೆ ಅಂತಿಮ ನಮನ ಸಲ್ಲಿಸಿದ ರಲ್ಲದೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆತನ ತಾಯಿಯನ್ನು ಸಂತೈಸುವಾಗ ಮುಖ್ಯಮಂತ್ರಿಗಳು ಭಾವುಕರಾದರು. ಶಾಸಕ ಅರುಣ್ ಕುಮಾರ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಕೂಡ ನವೀನ್‍ಗೆ ಅಂತಿಮ ನಮನ ಸಲ್ಲಿಸಿದರು.

ಮಧ್ಯಾಹ್ನ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನವೀನ್ ಅಂತಿಮಯಾತ್ರೆ ನಡೆಸಲಾಯಿತು. ಸಾವಿರಾರು ಮಂದಿ ಭಾಗವಹಿಸಿ ನವೀನ್‍ಗೆ ಕಣ್ಣೀರ ವಿದಾಯ ಹೇಳಿದರು. ಸಂಜೆ ವೇಳೆಗೆ ದಾವಣಗೆರೆ ಎಸ್‍ಎಸ್ ವೈದ್ಯಕೀಯ ಕಾಲೇಜಿಗೆ ನವೀನ್ ಮೃತದೇಹವನ್ನು ಕುಟುಂಬದವರು ದಾನ ಮಾಡಿದರು. ಅಂಗ ರಚನಾ ಶಾಸ್ತ್ರ ವಿಭಾಗ ದಲ್ಲಿ ದೇಹದಾನ ಪ್ರಕ್ರಿಯೆ ನಡೆಯಿತು. ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನವೀನ್ ತಾಯಿ ಮತ್ತು ಸಹೋದರನಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್ ಪ್ರಮಾಣ ಪತ್ರ ನೀಡಿದರು. ಈ ಕುರಿತು ಚಳಗೇರಿ ಗ್ರಾಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, ನನ್ನ ಮಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದ. ಆದರೆ ಸಾಧ್ಯವಾಗಲಿಲ್ಲ. ಆತನ ಮೃತದೇಹ ವೈದ್ಯಕೀಯ ಕ್ಷೇತ್ರಕ್ಕೆ ಬಳಕೆಯಾಗಲಿ ಎಂದು ದೇಹದಾನ ಮಾಡಿದ್ದೇವೆ ಎಂದರು.

Translate »