7 ತಿಂಗಳ ಗರ್ಭಿಣಿ ಪತ್ನಿ ಕೊಂದು ಕೆರೆಗೆಸೆದ ಪತಿ
ಮೈಸೂರು

7 ತಿಂಗಳ ಗರ್ಭಿಣಿ ಪತ್ನಿ ಕೊಂದು ಕೆರೆಗೆಸೆದ ಪತಿ

March 22, 2022

ಮೈಸೂರು, ಮಾ.21(ಆರ್‍ಕೆ)-ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಬೆಳವಾಡಿ ಕೆರೆಗೆಸೆದು ಬಂದಿದ್ದ ಅಮಾನ ವೀಯ ಘಟನೆ ಮೈಸೂರಿನ ಹೊರ ವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೈಸೂರಿನ ಹಿನಕಲ್ ಗ್ರಾಮದ ನನ್ನೇ ಶ್ವರ ಬಡಾವಣೆ ನಿವಾಸಿ ಪ್ರಮೋದ್ ಪತ್ನಿ ಅಶ್ವಿನಿ(23) ಹತ್ಯೆಗೀಡಾದ ಗರ್ಭಿಣಿ ಮಹಿಳೆ. ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿ ಪುತ್ರಿಯಾದ ಅಶ್ವಿನಿ ಮೈದನಹಳ್ಳಿ ಗ್ರಾಮದ ನಂದೀಶನ ಮಗ ಪ್ರಮೋದ್ ನನ್ನು ಪ್ರೀತಿಸಿ ವಿವಾಹವಾಗಿದ್ದರು.
ಕೃಷಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಪ್ರಮೋದನೊಂದಿಗೆ 2021ರ ಜೂನ್ 13ರಂದು ಮದುವೆಯಾಗಿದ್ದು, ಈಗ 7 ತಿಂಗಳ ಗರ್ಭಿಣಿ. ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಆತ, ನಂತರದ ದಿನಗಳಲ್ಲಿ ಮನೆಯವರ ಕುಮ್ಮಕ್ಕಿನಿಂದ ಕಿರುಕುಳ ನೀಡಲಾರಂಭಿಸಿ, ತಾಯಿ ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದ. ಒಡವೆಗಳನ್ನೆಲ್ಲಾ ಕಸಿದುಕೊಂಡು ಗಿರಿವಿ ಇರಿಸಿದ್ದ ಎಂದು ಅಶ್ವಿನಿ ಪೋಷಕರು ದೂರಿದ್ದಾರೆ.
ಕೊನೆಗೆ ಅಶ್ವಿನಿ ಮನೆಯವರೇ ಹಿನಕಲ್‍ನ ನನ್ನೇಶ್ವರನಗರದ ತಮ್ಮ ಮನೆಯಲ್ಲಿ ಮಗಳು-ಅಳಿಯನನ್ನು ಪ್ರತ್ಯೇಕವಾಗಿರಿಸಿದ್ದರು. ಅಲ್ಲಿಯೂ ಜಗಳ ಮುಂದುವರೆಸಿದ್ದ ಪ್ರಮೋದ, ಕಳೆದ ಶುಕ್ರವಾರ ತಡರಾತ್ರಿ ಮನೆಗೆ ಬಂದು ಪತ್ನಿಗೆ ಹೊಡೆದು, ಉಸಿರು ಕಟ್ಟಿಸಿ ಕೊಲೆಗೈದು, ತಾನು ತಂದಿದ್ದ ಕೃಷಿ ಇಲಾಖೆ ಕಾರಿನಲ್ಲೇ ಮೃತದೇಹವನ್ನು ಕೊಂಡೊಯ್ದು ಮಧ್ಯರಾತ್ರಿ ಬೆಳವಾಡಿ ಕೆರೆಗೆ ಎಸೆದು ಬಂದಿದ್ದ. ಮರುದಿನ ಎಂದಿನಂತೆ ಕೆಲಸಕ್ಕೂ ಹೋಗಿದ್ದ ಪ್ರಮೋದ, ಆದರೆ ಭಾನುವಾರ ಮಧ್ಯಾಹ್ನ ತಾನೇ ವಿಜಯನಗರ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ನಂತರ ಪೊಲೀಸರು ಆತನನ್ನು ಕರೆದೊಯ್ದು ಬೆಳವಾಡಿ ಕೆರೆಯಲ್ಲಿ ಈಜು ತಜ್ಞರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ನೆರವಿನಿಂದ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಗೆ ಅಶ್ವಿನಿ ಅವರ ಮೃತದೇಹವನ್ನು ಕೆರೆಯಿಂದ ಹೊರತೆಗೆದರು. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು, ಆರೋಪಿ ಯನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅಶ್ವಿನಿಯ ಅತ್ತೆ, ಮಾವ ಹಾಗೂ ನಾದಿನಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ. ಪ್ರತೀ ದಿನ ಫೋನ್ ಮಾಡುತ್ತಿದ್ದ ಅಶ್ವಿನಿ, ಶನಿವಾರ ಬೆಳಗ್ಗೆಯಿಂದ ಒಂದೇ ಒಂದು ಕರೆ ಮಾಡದೇ ಇದ್ದಾಗ ಸಂಶಯಗೊಂಡ ಪೋಷಕರು, ತಾವೇ ಫೋನ್ ಮಾಡಿದರೂ ಸಂಪರ್ಕಕ್ಕೆ ಸಿಗದ ಕಾರಣ ಮನೆ ಬಳಿ ಹೋದಾಗ ಅಲ್ಲಿಯೂ ಇರಲಿಲ್ಲ. ಮನೆಯವರು ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ. ಶನಿವಾರ ವಿಜಯನಗರ ಠಾಣೆಗೆ ಅಶ್ವಿನಿ ಕಣ್ಮರೆಯಾಗಿರುವ ಸಂಬಂಧ ಸಹೋದರಿ ಯಶಸ್ವಿನಿ ದೂರು ನೀಡಿದ್ದರು.

Translate »