`ತಾಯಿ’ ವಾತ್ಸಲ್ಯದ ಫಲ: ಜನರೇ ಹೇಳುತ್ತಾರೆ ಈ ಬಾರಿಯ  ಬಹುರೂಪಿ ರಾಷ್ಟ್ರೀಯ ರಂಗೋತ್ಸವ `ದಿ ಬೆಸ್ಟ್’
ಮೈಸೂರು

`ತಾಯಿ’ ವಾತ್ಸಲ್ಯದ ಫಲ: ಜನರೇ ಹೇಳುತ್ತಾರೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ `ದಿ ಬೆಸ್ಟ್’

March 22, 2022

ಮೈಸೂರು,ಮಾ.21(ಪಿಎಂ)- `ತಾಯಿ’ ಶೀರ್ಷಿಕೆಯ `ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಯಶಸ್ವಿಯಾಗಿ ಸಮಾಪ್ತಿ ಕಂಡಿದ್ದು, ಇಷ್ಟು ವರ್ಷಗಳ ಬಹುರೂಪಿಗಿಂತ ಈ ಬಾರಿಯದ್ದು `ದಿ ಬೆಸ್ಟ್’ ಎಂದು ಜನರೇ ಹೇಳು ತ್ತಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದರು.

ಮೈಸೂರು ರಂಗಾಯಣದ ಆವರಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ತಪ್ಪುಗಳೂ ಆಗದಂತೆ ಎಚ್ಚರ ವಹಿಸಿದ್ದ ಕಾರಣಕ್ಕೆ ಬಹು ರೂಪಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ರಂಗೋ ತ್ಸವದ ಯಶಸ್ಸಿಗೆ ರಂಗಾಯಣದ ಕಲಾವಿದರು, ಸಿಬ್ಬಂದಿ ಕಟಿಬದ್ಧವಾಗಿ ದುಡಿದಿದ್ದಾರೆ. ಹಿರಿಯ ಕಲಾವಿದರೂ ಸೇರಿದಂತೆ ರಂಗಾಯಣದ ಸುಮಾರು 40 ಮಂದಿಯ ತಂಡ ಸಮರೋಪಾದಿಯಲ್ಲಿ ಕೆಲಸ ಮಾಡಿತು.

ಈ ಬಾರಿಯ `ತಾಯಿ’ ಶೀರ್ಷಿಕೆಯ ಬಹುರೂಪಿ ಉತ್ಸವ ಅತ್ಯಂತ ವಿಶಿಷ್ಟವಾಗಿತ್ತು. ಜೊತೆಗೆ `ತಾಯಿ’ ಶೀರ್ಷಿಕೆ ಬಹಳ ತೂಕದ ವಿಷಯ ಎಂಬುದು ಗಮನಾರ್ಹ ಅಂಶ. ಮೊದಲ ದಿನದಿಂದಲೇ ಜನಪದೋತ್ಸವದ ಮೂಲಕ `ತಾಯಿ’ ಗುಣದ ಮಹತ್ವ ಅನಾವರಣಗೊಳ್ಳಲು ಆರಂಭ ವಾಯಿತು. ವಾಸ್ತವವಾಗಿ ಈ ಹಿಂದಿನ ಬಹುರೂಪಿಗಳಲ್ಲಿ ಶೀರ್ಷಿಕೆಯು ಕೇವಲ ಉತ್ಸವದ ವಿಚಾರ ಸಂಕಿರಣಕ್ಕೆ ಸೀಮಿತವಾಗಿ ಇರುತ್ತಿತ್ತು. ಆದರೆ ಈ ಬಾರಿಯ ತಾಯಿ ಶೀರ್ಷಿಕೆ ಇಡೀ ಉತ್ಸವದಲ್ಲಿ ವ್ಯಾಪಕತೆ ಪಡೆಯಿತು. ಸಮಾರೋಪದವರೆಗೂ ತಾಯಿ ಆವರಿಸುವಂತಾಯಿತು. ಕಲಾವಿದರು ಸಣ್ಣಸಣ್ಣ ಅಂಶಗಳನ್ನು
ತಾಯಿ ರೂಪದಲ್ಲಿ ಸೃಷ್ಟಿಸಿದರು ಎಂದರು. ಅನೇಕ ಶ್ರೇಷ್ಠ ಮಟ್ಟದ ರಂಗ ನಿರ್ದೇಶಕರು ಈ ಬಹುರೂಪಿಯಲ್ಲಿ ಪಾಲ್ಗೊಂಡಿದ್ದರು. ಅವರು ಆಪೇಕ್ಷಿಸಿದಂತೆ ಸೆಟ್‍ಗಳಿಗೂ ವ್ಯವಸ್ಥೆ ಮಾಡುವಲ್ಲಿ ರಂಗಾಯಣ ಯಶಸ್ವಿಯಾಗಿದೆ. ಬೇರೆ ಎಲ್ಲಿಯೂ ಇಂತಹ ಅಭೂತಪೂರ್ವ ಸಹಕಾರ-ಸೌಲಭ್ಯ ದೊರೆತಿರಲಿಲ್ಲ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಡುಗೆ ಯವರಿಂದ ಹಿಡಿದು ಪ್ರತಿಯೊಬ್ಬರೂ ಕಟಿಬದ್ಧವಾಗಿ ದುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುರೂಪಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ನಾಟಕಗಳೂ ಸೇರಿದಂತೆ ಬಹು ರೂಪಿಯ ಎಲ್ಲಾ ಕಾರ್ಯಕ್ರಮಗಳನ್ನು ಪ್ರೇಕ್ಷಕರೂ ಶಿಸ್ತಿನಿಂದ ವೀಕ್ಷಿಸಿದ್ದಾರೆ. ನಿನ್ನೆ ಪ್ರದರ್ಶನ ಕಂಡ `ಮತ್ತೆ ಮುಖ್ಯಮಂತ್ರಿ’ ನಾಟಕಕ್ಕೆ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಕೆಲವರನ್ನು ಎಲ್ಲಿಯಾದರೂ ಕುಳಿತು ನೋಡಿ ಎಂದು ಅವಕಾಶ ಕಲ್ಪಿಸಲಾಯಿತು. ಮಾಧ್ಯಮಗಳು ಅಭೂತ ಪೂರ್ವ ಬೆಂಬಲ ನೀಡಿದ್ದೂ ಬಹುರೂಪಿ ಯಶಸ್ಸಿಗೆ ಕಾರಣವಾಯಿತು ಎಂದು ಮಾಧ್ಯಮಗಳಿಗೆ ಧನ್ಯವಾದ ಹೇಳಿದರು.

ರಾಜ್ಯ ಉತ್ಸವ ಪಟ್ಟಿಯಲ್ಲಿದ್ದ ಕಾರಣ ಹೆಚ್ಚು ಜವಾಬ್ದಾರಿ: ಬಹುರೂಪಿ ಉತ್ಸವದಲ್ಲಿದ್ದ ಮಳಿಗೆಗಳಲ್ಲೂ ಉತ್ತಮ ವ್ಯಾಪಾರವಾಗಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಪುಸ್ತಕಗಳ ವಹಿವಾಟು ನಡೆಯಿತು. `ಸ್ವಚ್ಛ ಬಹುರೂಪಿ-ಹಸಿರು ರಂಗಾಯಣ’ ಘೋಷಣೆಯನ್ನು ಅಕ್ಷರಶಃ ಪಾಲಿಸಲು ಯಶಸ್ವಿಯಾಗಿದ್ದೇವೆ. ರಾಜ್ಯ ಸರ್ಕಾರ ಬಹುರೂಪಿಯನ್ನು ರಾಜ್ಯ ಉತ್ಸವ ಪಟ್ಟಿಗೆ ಸೇರಿಸಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಉತ್ಸವ ನಡೆಸುವ ಸವಾಲು ನಮ್ಮ ಎದುರಿಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ. ಏಕೆಂದರೆ ಉತ್ಸವ ಯಶಸ್ವಿ ಕಾಣದಿದ್ದರೆ, ರಾಜ್ಯ ಉತ್ಸವ ಪಟ್ಟಿಯಿಂದ ಕೈಬಿಡುವ ಅವಕಾಶವಿದೆ. ಹೀಗಾಗಿ ನಾವು ಅತ್ಯಂತ ಎಚ್ಚರದಿಂದ ಉತ್ಸವ ಯಶಸ್ಸು ಕಾಣುವಂತೆ ಮಾಡುವಲ್ಲಿ ಸಫಲಗೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ರಂಗಾಯಣ ಉಪನಿರ್ದೇಶಕಿ ನಿರ್ಮಲ ಮಠಪತಿ, ಬಹುರೂಪಿ ಸಂಚಾಲಕ ಅಂಜು ಸಿಂಗ್ ಸೇರಿದಂತೆ ರಂಗಾಯಣದ ಕಲಾವಿದರು, ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.

Translate »