ಖ್ಯಾತ ಬಾಲಿವುಡ್ ಗಾಯಕ ಗುರು ರಾಂಧವ ಗಾಯನ ಮೋಡಿ
ಮೈಸೂರು

ಖ್ಯಾತ ಬಾಲಿವುಡ್ ಗಾಯಕ ಗುರು ರಾಂಧವ ಗಾಯನ ಮೋಡಿ

October 2, 2019

ಮೈಸೂರು: ಯುವ ದಸರಾದ ಮೊದಲ ದಿನ ಬಾಲಿ ವುಡ್‍ನ ಗುರು ರಾಂಧವ ಗಾಯನಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು.

ಗೀತೆ ರಚನೆಕಾರ, ಗಾಯಕ, ಸಂಗೀತ ನಿರ್ದೇಶಕನಾಗಿರುವ ಯುವ ಪ್ರತಿಭೆ ಗುರು ರಾಂಧವ ತಮ್ಮ ತಂಡದೊಂದಿಗೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ನಡೆಸಿಕೊಟ್ಟು, ರಸದೌತಣ ನೀಡಿದರು. ಕಾತುರದಿಂದ ಕಾದು ಕುಳಿತಿದ್ದ ಯುವ ಸಮೂಹ, ಗುರು ರಾಂಧವ ಗಾಯನ ವನ್ನು ಆಸ್ವಾದಿಸಿ, ಸಂಭ್ರಮಿಸಿದರು.

ಇದಕ್ಕೂ ಮೊದಲು ಕನ್ನಡ ಚಿತ್ರ ರಂಗದ ನಿರ್ದೇಶಕ ನಾಗಶೇಖರ್ ನೇತೃತ್ವದಲ್ಲಿ `ಕೇಳದೆ ನಿಮಗೀಗ’ ವಿಶೇಷ ಕಾರ್ಯಕ್ರಮ ನಡೆಯಿತು. ಜನ ಪ್ರಿಯ ಗಾಯಕಿ ಶಮಿತಾ ಮಲ್ನಾಡ್ ಸಹ ಕಲಾವಿದರೊಂದಿಗೆ `ರ್ಯಾಂಬೋ-2’ ಚಿತ್ರದ ಅರ್ಜುನ್ ಜನ್ಯ ಸಂಯೋಜನೆಯ `ಚುಟು ಚುಟು ಅನ್ತ್ಯೈತೆ ನನಗಾ…’ ಹಾಡನ್ನು ಹಾಡುತ್ತಿದ್ದಂತೆ ಯುವ ಜನತೆ ಉತ್ಸಾಹ ಹೆಚ್ಚಿದಂತಿತ್ತು. `ಮಂಡ್ಯದ ಗಂಡು ಮುತ್ತಿನ ಚೆಂಡು…’, `ನನ್ನ ನೀನು ಗೆಲ್ಲಲಾರೆ ಛಲವೇತಕೆ…’ `ಪ್ರೇಮ ಪ್ರೀತಿ ನನ್ನುಸಿರು…’ ಗೀತೆಗಳಿಗೆ ಕಲಾವಿದರು ನೃತ್ಯ ಪ್ರದರ್ಶಿಸಿದರು. ನಾಗಶೇಖರ್ ಹೇಳಿದಂತೆ ಸಚಿವ ವಿ.ಸೋಮಣ್ಣ ಅವರಿಗೆ ಇಷ್ಟವಾದ `ಬಂಗಾರದ ಮನುಷ್ಯ’ ಚಿತ್ರದ `ಬಾಳ ಬಂಗಾರ ನೀನು ಹಣೆಯ ಸಿಂಧೂರ ನೀನು, ನಿನ್ನ ಕೈಲಾಡೋ ಬೊಂಬೆ ನಾನಯ್ಯ…’ ಗೀತೆಯನ್ನು ಶಮಿತಾ ಮಲ್ನಾಡ್ ಸುಶ್ರಾವ್ಯವಾಗಿ ಹಾಡಿದರು. ನಡುವೆ ಡಾ.ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಅವರ ಅಪರೂಪದ ಫೋಟೋ, ಮಾಹಿತಿ ಸಹಿತ ವೀಡಿಯೋ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ದಿವ್ಯಾರಾಂ ಟಾಕೀಸ್ ಕಲಾವಿದರು ಪ್ರಸ್ತುತಪಡಿಸಿದ ಇಲ್ಯುಮಿನಿಟಿ ಕಾರ್ಯಕ್ರಮ ಎಲ್ಲರ ಅತ್ಯಾಕರ್ಷಕವಾಗಿತ್ತು. ವೇದಿಕೆ ಸೇರಿದಂತೆ ಇಡೀ ಮೈದಾನದ ವಿದ್ಯುತ್ ದೀಪಗಳನ್ನು ಆರಿಸಿ, ಮಿನುಗು ದೀಪಗಳಿದ್ದ ಉಡುಪಿನಲ್ಲಿ ಕಲಾವಿದರು ಪ್ರಸ್ತುತಪಡಿಸಿದ ನೃತ್ಯಕ್ಕೆ ಅತೀವ ಮೆಚ್ಚುಗೆ ವ್ಯಕ್ತವಾಯಿತು. ನಂಜನಗೂಡಿನ ನೂಪುರ ನೃತ್ಯಶಾಲೆ ವಿದ್ಯಾರ್ಥಿಗಳ ಭರತನಾಟ್ಯ ಮನಮೋಹಕವಾಗಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ನೃತ್ಯವನ್ನು ಮೊಟಕುಗೊಳಿಸಿದ್ದು ಕಲಾಸಕ್ತರ ಬೇಸರಕ್ಕೆ ಕಾರಣ ವಾಯಿತು. ಮೈಸೂರಿನ ಯುವರಾಜ ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ದೇಶದ ವೈವಿದ್ಯತೆ, ಭಾವೈಕ್ಯತೆಯನ್ನು ಪ್ರತಿಬಿಂಬಿಸಿದರು. ಸಿನಿ ತಾರೆಯರಾದ ದೀರೇನ್ ರಾಮ್ ಕುಮಾರ್(ಡಾ.ರಾಜ್‍ಕುಮಾರ್ ಮೊಮ್ಮಗ), ಹರ್ಷಿಕಾ ಪೂಣಚ್ಚ, ಪ್ರೀತಂ ಗುಬ್ಬಿ, ಕಿಸ್ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್, ನಾಯಕ ನಟ ವಿರಾಟ್, ನಟಿ ಶ್ರೀಲಲಿತಾ ಯುವ ದಸರೆಯಲ್ಲಿ ಪಾಲ್ಗೊಂಡು, ತಾರಾ ಮೆರಗು ನೀಡಿದರು.

Translate »