ವಿಶೇಷ ಪ್ಯಾಕೇಜ್‍ನಲ್ಲಿ ರೈತರು, ಕಾರ್ಮಿಕರಿಗೆ ಹೆಚ್ಚು ಹಣ ನೀಡಬೇಕು
ಮೈಸೂರು

ವಿಶೇಷ ಪ್ಯಾಕೇಜ್‍ನಲ್ಲಿ ರೈತರು, ಕಾರ್ಮಿಕರಿಗೆ ಹೆಚ್ಚು ಹಣ ನೀಡಬೇಕು

May 14, 2020

ಮೈಸೂರು, ಮೇ 13(ಆರ್‍ಕೆ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‍ನಲ್ಲಿ ರೈತರು ಹಾಗೂ ಕಾರ್ಮಿಕ ವರ್ಗಕ್ಕೆ ಹೆಚ್ಚು ಹಣವನ್ನು ಒದಗಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ. ಮೈಸೂ ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಮಾರಣಾಂತಿಕ ಸೋಂಕಿನಿಂದ ಕೃಷಿ ಮತ್ತು ಆಹಾರ ಉತ್ಪನ್ನಗಳ ಅವಶ್ಯಕತೆ ಎಷ್ಟಿದೆ ಎಂಬುದು ತಿಳಿದಿದೆ. ಕೃಷಿ ಕಾರ್ಮಿಕರ ಪ್ರಾಮುಖ್ಯತೆಯನ್ನು ಕೋವಿಡ್-19 ಲಾಕ್‍ಡೌನ್ ಸ್ಪಷ್ಟಪಡಿಸಿದೆ ಎಂದರು.

ರೈತರು, ಗುಡಿ ಕೈಗಾರಿಕೆ ಹಾಗೂ ಕಾರ್ಮಿಕ ವರ್ಗ ಕೈಕಟ್ಟಿ ಕುಳಿತರೆ ಇಡೀ ವ್ಯವಸ್ಥೆ ತಟಸ್ಥವಾಗುತ್ತದೆ ಎಂಬುದು ಇಂದಿನ ಸಂಕಷ್ಟ ಪರಿಸ್ಥಿತಿಯಿಂದ ತಿಳಿದಿದೆ. ನಾಡಿನ ಬೆನ್ನೆಲುಬಾಗಿರುವ ರೈತ ಲಾಕ್‍ಡೌನ್‍ನಿಂದಾಗಿ ಬದುಕು ಕಳೆದುಕೊಂಡಿದ್ದಾನೆ ಎಂದರು.

ಕೃಷಿ ಕಾರ್ಮಿಕರು, ಗುಡಿ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾ ರದ ವಿಶೇಷ ಪ್ಯಾಕೇಜ್‍ನಲ್ಲಿ ಬಹುತೇಕ ಪಾಲನ್ನು ನೀಡಿ, ಪುನಶ್ಚೇತನ ನೀಡಬೇಕು. ರೈತರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಹೊಸದಾಗಿ ದೀರ್ಘಾ ವಧಿ ಸಾಲ ನೀಡಬೇಕು ಎಂದು ನಾಗೇಂದ್ರ ಒತ್ತಾಯಿಸಿ ದರು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ರೈತರಿಗೆ ಮಾರಕವಾಗಿರುವುದರಿಂದ ಈ ಪ್ರಸ್ತಾವನೆಯನ್ನು ಕೈ ಬಿಡಬೇಕು. ಶಾಸನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸುವ ಮೂಲಕ ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವ ಈ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು ಎಂದರಲ್ಲದೆ, ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡಲ್ಲಿ ರಾಜ್ಯಾದ್ಯಂತ ರೈತರು ಹೋರಾಟ ಮಾಡಬೇಕಾಗುತ್ತದೆ ಎಂದೂ ಬಡಗಲಪುರ ನಾಗೇಂದ್ರ ಎಚ್ಚರಿಸಿದ್ದಾರೆ.

Translate »