ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ರೈತರ ಧರಣಿ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ರೈತರ ಧರಣಿ

June 6, 2020

ಮೈಸೂರು, ಜೂ. 5(ಆರ್‍ಕೆ) ಲಾಕ್‍ಡೌನ್ ಅವಧಿಯ ಗೃಹಬಳಕೆ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, ಖಾಸಗಿ ಶಾಲಾ ಶುಲ್ಕ ವಸೂಲಿಗೆ ಕಡಿವಾಣ ಹಾಕ ಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಮೈಸೂರಲ್ಲಿ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಧರಣಿಯಲ್ಲಿ ಸರ್ಕಾರದ ಜನವಿರೋಧಿ ಧೋರಣೆಗಳನ್ನು ರೈತರು ಖಂಡಿಸಿದರು. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೆ ಸಂಕಷ್ಟ ಉಂಟಾಗಿದೆ. ಬಾಕಿ ಸಾಲ ಕಟ್ಟಿದವರಿಗೆ ಮಾತ್ರ ಹೊಸ ಸಾಲ ನೀಡುತ್ತೇವೆ ಎಂದಿರುವ ಸರ್ಕಾರದ ನಿಲುವಿನಿಂದ ರೈತ ಕಂಗಾಲಾಗಿ ದ್ದಾನೆ. ಸರ್ಕಾರ ಈ ಸಮಸ್ಯೆಯನ್ನು ನೀಗಿಸಬೇಕೆಂದು ಧರಣಿ ನಿರತರು ಒತ್ತಾಯಿಸಿದರು.

ಸ್ವಸಹಾಯ ಸಂಘ, ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ಕಂತು ಪಾವತಿಸಲು 2021ರ ಮಾರ್ಚ್‍ವರೆಗೆ ಅವಕಾಶ ನೀಡಬೇಕು, ಎನ್.ಆರ್.ಇಜಿ ಯೋಜನೆಯನ್ನು ಕೃಷಿ ವಲಯಕ್ಕೂ ವಿಸ್ತರಿಸಬೇಕು, ಕಲ್ಯಾಣ ಮಂಟಪಗಳಿಗೆ ಪಾವತಿಸಿ ರುವ ಮುಂಗಡ ಹಣ ವಾಪಸ್ ಕೊಡಿಸಬೇಕು ಎಂದೂ ರೈತರು ಆಗ್ರಹಿಸಿದರು.

ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾ ನಿರತ ರೈತರು ಎಡಿಸಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು. ಅತ್ತಹಳ್ಳಿ ದೇವರಾಜು, ಭಾಗ್ಯರಾಜ್, ಶಂಕರ್, ನಾಗೇಂದ್ರ, ಸೋಮಶೇಖರ್, ಮಂಜುನಾಥ ಸೇರಿದಂತೆ ಹಲವು ರೈತರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.

Translate »