ಮಾರ್ಗ ಮಧ್ಯ ಬರುವ ಕೆರೆಗಳಿಗೆ ನೀರು ತುಂಬಿಸಲು ರೈತರ ಮನವಿ
ಬನ್ನಿಕುಪ್ಪೆ: ಹುಣಸೂರು ತಾಲೂಕಿನ ಶ್ರವಣನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಲಕ್ಷ್ಮಣ ತೀರ್ಥ ನದಿಯಿಂದ ಕೊಳಗಟ್ಟ ಹೊಸ ಕೆರೆಗೆ ಎಸ್‍ಸಿಪಿ ಯೋಜನೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಆರಂಭದಲ್ಲೇ ಅಪಸ್ವರ ಕೇಳಿ ಬರುತ್ತಿವೆ.
ಲಕ್ಷ್ಮಣ ತೀರ್ಥನದಿಯಿಂದ ಹಲವು ಏತ ನೀರಾವರಿ ಯೋಜನೆ ಜಾರಿಯಾಗಿದ್ದರೂ ರೈತರ ಉಪಯೋಗಕ್ಕೆ ಬಂದ ನಿದರ್ಶನ ಗಳಿಲ್ಲ. ಇದೇ ಹಾದಿಯಲ್ಲೇ ಕೊಳಗಟ್ಟ ಹೊಸಕೆರೆ ಏತ ನೀರಾವರಿ ಕಾಮಗಾರಿ ಸಾಗಿದೆ. ಯೋಜನೆಯ ಮಾರ್ಗ ಮಧ್ಯ ಬರುವ ಶ್ರವಣನ ಕೆರೆ. ಗುರುಗಳ ಕೆರೆ ಹಾಗೂ ರಾಯನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕೈಬಿಟ್ಟು ದೂರದ ಕೊಳಗಟ್ಟ ಹೊಸಕೆರೆಗೆ ನೀರು ತುಂಬಿಸುವ ಕಸರತ್ತು ನಡೆಸಿರುವುದು ವ್ಯರ್ಥ ಪ್ರಯತ್ನ ಎನಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು, ರೈತರ ಕಣ್ಣು ಕೆಂಪಾಗಿಸಿದೆ.
ಲಕ್ಷ್ಮಣ ತೀರ್ಥ ನದಿ ತೀರದಿಂದ ಕೂಗಳತೆ ದೂರದಲ್ಲೇ ಶ್ರವಣಕೆರೆ ಇದ್ದರೂ ನೀರು ತುಂಬಿಸುವ ವ್ಯವಸ್ಥೆ ಈ ಯೋಜನೆಯಲ್ಲಿ ಸೇರಿಸಿಲ್ಲ. ಕೆರೆ ಸಮೀಪವೇ ಪೈಪ್‍ಲೈನ್ ಹಾದುಹೊಗಿದ್ದರೂ ಅಧಿಕಾರಿಗಳು ವಾಲ್ ಇಟ್ಟು ನೀರು ತುಂಬಿಸುವ ಆಲೋಚನೆ ಮಾಡದಿರುವುದು ದುರಂತ ಎಂಬಂತಾಗಿದೆ. 2 ಕಿ.ಮೀ ದೂರದಲ್ಲಿ 20 ಎಕರೆ ವಿಸ್ತೀರ್ಣ ದಲ್ಲಿ ಹರಡಿಕೊಂಡಿರುವ ರಾಯನಹಳ್ಳಿ ಕೆರೆಗೂ ನೀರು ತುಂಬಿಸುವ ಚಿಂತನೆ ಇಲ್ಲ ವಾಗಿದೆ. ಅಲ್ಲದೆ ಅರಬ್ಬಿ ತಿಟ್ಟು ವನ್ಯಧಾಮ ಮೃಗಗಳಿಗೆ ಆಸರೆಯಾಗಿರುವ ಗುರುಗಳ ಕೆರೆಗೂ ಏತ ನಿರಾವರಿಯ ನೀರಿನ ಭಾಗ್ಯ ವಿಲ್ಲವಾಗಿದ್ದು, ಬೇಸಿಗೆಯಲ್ಲಿ ಪ್ರಾಣಿಗಳ ದಾಹ ತಣಿಸುವಲ್ಲಿ ಈ ಕೆರೆ ಪ್ರಮುಖ ಪಾತ್ರ ವಹಿಸಲಿದ್ದು, ಈ ಕೆರೆಯನ್ನು ಪರಿಗಣಿಸದೆ ದೂರದ ಕೊಳಗಟ್ಟ ಹೊಸಕೆರೆಗೆ ನೀರು ತಲುಪಿಸುವ ಅವೈಜ್ಞಾನಿಕ ಯೋಜನೆ ಮೂರು ಗ್ರಾಮ ಗಳ ಜನತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಆಶ್ರಯಿಸಿರುವ ರೈತರ ಸಂಖ್ಯೆ ಹೆಚ್ಚಾ ಗಿದ್ದು, 3 ಕೆರೆಗಳಿಗೆ ನೀರು ತುಂಬಿಸುವುದ ರಿಂದ ಕೊಳವೆ ಬಾವಿಗಳು ಮರುಜೀವ ಬರಲಿದೆ ಎಂಬುದು ಸ್ಥಳೀಯ ರೈತರು ಇಂಗಿತವಾಗಿದೆ. ಭೌಗೋಳಿಕವಾಗಿ ಏತ ನೀರಾವರಿ ಪೈಪ್‍ಲೈನ್ ಎತ್ತರ ಪ್ರದೇಶದಲ್ಲಿ ಹಾದುಹೊಗಿದ್ದು, ರಾಯನಹಳ್ಳಿ, ಗುರುಗಳ ಕೆರೆ ತಗ್ಗು ಪ್ರದೇಶದಲ್ಲಿದೆ. ಈ ಕೆರೆಗಳಿಗೆ ಪೈಪ್ ಅಳವಡಿಸದೇ ನೀರು ತುಂಬಿಸ ಬಹುದಾಗಿದ್ದರೂ ಸಂಬಂಧ ಪಟ್ಟವರು ಕ್ರಮ ವಹಿಸಿಲ್ಲದಿರುವುದು ವಿಪರ್ಯಾಸ.
ನದಿಯಿಂದ ಕೂಗಳತೆಯಲ್ಲೇ ಶ್ರವಣಕೆರೆ ಇದ್ದು, ಸಮೀಪವೇ ಪೈಪ್‍ಲೈನ್ ಹಾದು ಹೊಗಿದೆ ಆದರೂ ಅಧಿಕಾರಿಗಳು ನೀರು ತುಂಬಿಸುವ ಆಲೋಚನೆ ಮಾಡ ದಿರುವುದು ದುರಂತ. – ಪದ್ಮನಾಭs, ಶ್ರವಣನಹಳ್ಳಿ ನಿವಾಸಿ.
ಏತ ನೀರಾವರಿ ಪೈಪ್‍ಲೈನ್ ಎತ್ತರ ಪ್ರದೇಶದಲ್ಲಿ ಹಾದುಹೊಗಿದ್ದು, ಸಂಬಂಧ ಪಟ್ಟವರು ಮನಸ್ಸು ಮಾಡಿದರೆ ತಗ್ಗು ಪ್ರದೇಶದಲ್ಲಿರುವ ರಾಯನಹಳ್ಳಿ, ಗುರುಗಳ ಕೆರೆಗಳಿಗೆ ಪೈಪ್ ಅಳವಡಿಸದೇ ನೀರು ತುಂಬಿಸಬಹುದು. – ಶೇಷೇಗೌಡ, ರಾಯನಹಳ್ಳಿ ನಿವಾಸಿ.