ಸೋಲಿನ ಭಯದಿಂದ ತಾಪಂ, ಜಿಪಂ ಚುನಾವಣೆ ಮುಂದೂಡಿದ ಬಿಜೆಪಿ
ಮೈಸೂರು

ಸೋಲಿನ ಭಯದಿಂದ ತಾಪಂ, ಜಿಪಂ ಚುನಾವಣೆ ಮುಂದೂಡಿದ ಬಿಜೆಪಿ

December 9, 2021

ಮೈಸೂರು,ಡಿ.8(ಆರ್‍ಕೆಬಿ)- ಸೋಲಿನ ಭೀತಿಯಿಂದ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾ ವಣೆಯಿಂದ ಹಿಂದೆ ಸರಿ ದಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋ ಪಿಸಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಮೊದಲ ಬಾರಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು. ಬಿಜೆಪಿ ರಾಜ್ಯಸಭಾ ಸದಸ್ಯ ರಾಗಿದ್ದ ರಾಮಾಜೋಯಿಸ್ ಅವರು ಇದನ್ನು ವಿರೋಧಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದ್ದರಿಂದ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮೀಸ ಲಾತಿ ಸೌಲಭ್ಯ ಉಳಿದಿದೆ ಎಂದರು.
ಐದು ವರ್ಷಗಳಿಗೊಮ್ಮೆ ಸ್ಥಳೀಯ ಸಂಸ್ಥೆ ಗಳಿಗೆ ಕಡ್ಡಾಯವಾಗಿ ಚುನಾವಣೆ ನಡೆಯು ವಂತೆ ಕಾನೂನು ತಂದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಬಿಜೆಪಿ ಸರ್ಕಾರ ಸೋಲಿನ ಭಯದಿಂದ ತಾಲೂಕು, ಜಿಲ್ಲಾ ಪಂಚಾ ಯತ್ ಚುನಾವಣೆಯನ್ನು ಮುಂದೂಡಿದೆ. ರಾಜ್ಯ ಸರ್ಕಾರದ ಇಂತಹ ಕೆಟ್ಟ ನಿರ್ಧಾರ ದಿಂದಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರೇ ಇಲ್ಲದಂತಾಗಿದೆ. ಸಂವಿಧಾನದ ನಿಯಮಗಳನ್ನು ಸರ್ಕಾರ ಉಲ್ಲಂಘಿಸಿರು ವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು. ಸ್ಥಳೀಯ ಸಂಸ್ಥೆಗಳನ್ನು ಸದೃಢಗೊಳಿ ಸಲು ಬಿಜೆಪಿಯಾಗಲೀ, ಜೆಡಿಎಸ್ ಆಗಲೀ ಏನನ್ನೂ ಮಾಡಿಲ್ಲ. ಅವರು ಸಾಮಾಜಿಕ ನ್ಯಾಯದ ಮೀಸಲಾತಿಯನ್ನೇ ವಿರೋಧಿ ಸಿದರು. ಮೀಸಲಾತಿಯನ್ನೇ ವಿರೋಧಿಸಿದವ ರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ರಾಜ್ಯದ ಐದು ದ್ವಿಸದಸ್ಯ ಸ್ಥಾನಗಳಲ್ಲಿ ಮೈಸೂರು-ಚಾಮರಾಜನಗರ ಒಂದಾ ಗಿದ್ದು, ಇನ್ನುಳಿದಂತೆ ದಕ್ಷಿಣ ಕನ್ನಡ-ಉಡುಪಿ, ಧಾರವಾಡ-ಹಾವೇರಿ-ಗದಗ, ವಿಜಯಪುರ -ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಕೇವಲ ಸಾಮಾ ಜಿಕ ನ್ಯಾಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆಯೇ ಹೊರತು ಜಾತಿ ಪರಿಗಣನೆಯಿಂದಲ್ಲ ಎಂದು ಹೇಳಿದರು.

ಸಾಮಾಜಿಕ ನ್ಯಾಯದಡಿ ಅಭ್ಯರ್ಥಿಗಳ ಆಯ್ಕೆ: ಪರಿಷತ್ ಚುನಾವಣೆಯಲ್ಲಿ ನಾವು ಸಾಮಾಜಿಕ ನ್ಯಾಯ ಪಾಲನೆ ಮಾಡಿದ್ದೇವೆ. ತಲಾ 1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ, 5 ಜನ ಹಿಂದುಳಿದ ವರ್ಗದ, ಮಹಿಳಾ ಅಭ್ಯರ್ಥಿ, ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದರು.
1980ರ ದಶಕದಲ್ಲಿ ಕಾಂಗ್ರೆಸ್ ಸರ್ಕಾ ರವು ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸಿತು. ಇದನ್ನು ಬಿಜೆಪಿ ವಿರೋ ಧಿಸಿತ್ತು. ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಎಂದು ಹೇಳಿಕೊಳ್ಳಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಸಮಾಜದ ಶೋಷಿತ, ಹಿಂದುಳಿದ ವರ್ಗ ಗಳ ಸಬಲೀಕರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಕೊಡುಗೆ ಏನು ಎಂದು ಪ್ರಶ್ನಿ ಸಿದ ಅವರು, ಬಿಜೆಪಿ ತನ್ನ ಮೂರೂವರೆ ವರ್ಷಗಳ ಅವಧಿಯಲ್ಲಿ ಬಡವರಿಗೆ ಮತ್ತು ಗ್ರಾಮೀಣ ಜನರಿಗೆ ಒಂದೇ ಒಂದು ಮನೆಯನ್ನೂ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಸರ್ಕಾರ. ಈ ನಿಟ್ಟಿನಲ್ಲಿ ಬಿಜೆಪಿಯವರ ಕೊಡುಗೆ ಏನಿದೆ? ಬಿಜೆಪಿ ಆಡಳಿತದಲ್ಲಿ ಬಡ ರೈತ ಇನ್ನಷ್ಟು ಬಡವನಾಗುತ್ತಿದ್ದಾನೆ. ಅದಾನಿ, ಅಂಬಾನಿ ಯಂತಹವರ ಆಸ್ತಿ ದುಪ್ಪಟ್ಟಾಗುತ್ತಿದೆ. ಬಡ ವರಿಗೆ ಉಚಿತವಾಗಿ ಕೊಡುವ ಅಕ್ಕಿ ಪ್ರಮಾಣ ಕಡಿಮೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿಲ್ಲ, ಉದ್ಯಮಿಗಳ ಸಾಲ ಮನ್ನಾ ಮಾಡಿ, ಕಾಪೆರ್Çರೇಟ್ ತೆರಿಗೆ ಇಳಿಕೆ ಮಾಡು ತ್ತಾರೆ. ಹಾಗಾದರೆ ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು.

ಇಂತಹ ಭ್ರಷ್ಟ ಸರ್ಕಾರ ಎಂದೂ ನೋಡಿಲ್ಲ: ಕೆಲವು ದಿನಗಳ ಹಿಂದೆ ನಾನು ಬೆಳಗಾವಿಗೆ ಹೋಗಿದ್ದಾಗ ನೂರಾರು ಮಹಿಳೆಯರು ಬಂದು 2019ರಲ್ಲಿ ಬಂದ ಪ್ರವಾಹದಿಂದ ಮನೆ ಕಳೆದುಕೊಂಡ ನಮಗೆ ಸರ್ಕಾರದಿಂದ ನಯಾಪೈಸೆಯೂ ಪರಿಹಾರ ಸಿಕ್ಕಿಲ್ಲ. ದಯ ವಿಟ್ಟು ನೀವೇ ಏನಾದರೂ ಮಾಡಬೇಕು ಎಂದು ಅಂಗಲಾಚಿದರು. ಇನ್ನೆಷ್ಟು ವರ್ಷ ಕಳೆದ ಮೇಲೆ ಅವರಿಗೆ ಸರ್ಕಾರ ಪರಿ ಹಾರ ಕೊಡುತ್ತದೆ? ಎಂದು ಪ್ರಶ್ನಿಸಿದರು.
ಕೊರೊನಾ ಎರಡನೇ ಅಲೆ ಸಂದರ್ಭ ದಲ್ಲಿ ಸರ್ಕಾರ ರೋಗಿಗಳಿಗೆ ಆಸ್ಪತ್ರೆ, ಆಕ್ಸಿ ಜನ್ ವ್ಯವಸ್ಥೆಯನ್ನು ಮಾಡಿಲ್ಲ, ಸತ್ತವರಿಗೆ ಪರಿಹಾರ ನೀಡಿಲ್ಲ, ಸತ್ತವರ ಸಂಖ್ಯೆ ಯಲ್ಲೂ ಸುಳ್ಳು ಲೆಕ್ಕ ಹೇಳಿದರು. ಔಷಧಿ, ವೆಂಟಿಲೇಟರ್, ಮಾಸ್ಕ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದರು. ಇಂತಹ ನಿರ್ಲಜ್ಜ, ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ಕಂಡಿರಲಿಲ್ಲ ಎಂದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯೂ ವರ್ಗಾ ವಣೆ ಪಡೆಯಲು ಸಾಧ್ಯವಿಲ್ಲ, ಕಡತಗಳು ಇರುವ ಜಾಗದಿಂದ ಅಲುಗಾಡುವುದಿಲ್ಲ. ಅಭಿವೃದ್ಧಿ ಕೆಲಸಗಳು ಮುಂದಕ್ಕೆ ಸಾಗು ತ್ತಿಲ್ಲ. ಇದು ಬರೀ ಲಂಚಕೋರರ ಸರ್ಕಾರ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಕೊರೊನಾ ವೇಳೆ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೊಟ್ಟಿಲ್ಲ. ಇದೇ ಸರ್ಕಾರ ಮುಂದು ವರೆದರೆ ಮುಂದೆ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕೊಡೋಕು ಹಣವಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಸಂಘದ ದೂರು ತನಿಖೆ ಯಾಗಲಿ: ಬಿಜೆಪಿ ಸರ್ಕಾರದಲ್ಲಿ ತೀವ್ರ ಭ್ರಷ್ಟಾ ಚಾರ ಮತ್ತು ಸ್ವಜನಪಕ್ಷಪಾತದ ಬಗ್ಗೆ ತಿಳಿ ಸಿದ ಸಿದ್ದರಾಮಯ್ಯ, ಶೇ.40ರಷ್ಟು ಕಮಿ ಷನ್ ಇಲ್ಲದೆ ಬಿಲ್‍ಗಳು ಪಾಸಾಗುತ್ತಿಲ್ಲ ಎಂಬ ಗುತ್ತಿಗೆದಾರರ ಸಂಘದ ದೂರಿನ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸ ಬೇಕು ಎಂದು ಒತ್ತಾಯಿಸಿದರು.

ನನ್ನ 5 ವರ್ಷಗಳ ಆಡಳಿತದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಯಾವ ಮಾನ ದಂಡವನ್ನು ಉಲ್ಲಂಘಿಸದೆ ಸುಸ್ಥಿರ ಆಡ ಳಿತ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಬಿಜೆಪಿಯವರು ತಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಲಿ ನೋಡೋಣ ಎಂದು ತಿಳಿಸಿದರು.

ದ್ವೇಷದ ರಾಜಕಾರಣ ಅಲ್ಲಗಳೆದ ಸಿದ್ದ ರಾಮಯ್ಯ: ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಟೀಕೆಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನನಗೆ ಹೆಚ್.ಡಿ.ದೇವೇ ಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಹಾಗಾಗಿ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಅದು ಬಿಟ್ಟು ಸಿದ್ದರಾಮಯ್ಯನವರಿಗೆ ನನ್ನ ಮತ್ತು ನಮ್ಮ ಕುಟುಂಬವನ್ನು ಕಂಡರೆ ಆಗು ವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಯನ್ನು ಸಿದ್ದರಾಮಯ್ಯ ಅಲ್ಲಗಳೆದರು.

ಆರ್.ಎಸ್.ಎಸ್‍ಗೆ ಬೈಯ್ಯುವ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸಿದ್ದು, ಚುನಾವಣೆಯಲ್ಲಿ ಒಳಒಪ್ಪಂದ ಮಾಡಿಕೊಳ್ಳೋದನ್ನು ವಿರೋಧಿಸಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಬಳಿ ಸಮರ್ಪಕ ಉತ್ತರ ಇದ್ದರೆ ಕೊಡಲಿ ಎಂದರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಮುಖಂಡ ಕೆ.ಮರಿಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »