ಊಟಿ ಬಳಿ ವಾಯುಪಡೆ ಹೆಲಿಕಾಪ್ಟರ್ ಪತನ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ
News

ಊಟಿ ಬಳಿ ವಾಯುಪಡೆ ಹೆಲಿಕಾಪ್ಟರ್ ಪತನ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ

December 9, 2021

ನೀಲಗಿರಿ, ಡಿ.8-ವಾಯುಸೇನೆ ಹೆಲಿ ಕಾಪ್ಟರ್ ಪತನಗೊಂಡು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ದುರ್ಮ ರಣಕ್ಕೀಡಾದ ಘಟನೆ ನೀಲಗಿರಿ ಜಿಲ್ಲೆಯ ಕೂನೂರು ಸಮೀಪ ಕಾಟೇರಿ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಈ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪ್ರಯಾಣಿಸು ತ್ತಿದ್ದು, ದುರಂತದಲ್ಲಿ ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿ ದಿದ್ದು, ಶೇ.80ರಷ್ಟು ಸುಟ್ಟ ಗಾಯಗಳೊಂದಿಗೆ ವೆಲ್ಲಿಂಗ್ಟನ್‍ನ ಸೇನಾ ಆಸ್ಪತ್ರೆಯಲ್ಲಿ ಚಿಂತಾ ಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಂತದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿ ಯರ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜೀಂದರ್ ಸಿಂಗ್,
ನಾಯಕ್ ಗುರು ಸೇವಕ್ ಸಿಂಗ್, ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜ, ಹವಾಲ್ದಾರ್ ಸತ್ಪಾಲ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚವ್ಹಾಣ್, ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ.

ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ರಕ್ಷಣಾ ಸಿಬ್ಬಂದಿಯ ಕಾಲೇಜಿನಲ್ಲಿ ಇಂದು (ಬುಧವಾರ) ಮಧ್ಯಾಹ್ನ ನಡೆಯಲಿದ್ದ ಕೆಡೆಟ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಡಿಎಸ್ ಬಿಪಿನ್ ರಾವತ್ ಮತ್ತು ಅಧಿಕಾರಿಗಳ ತಂಡ ಬೆಳಗ್ಗೆ ದೆಹಲಿಯಿಂದ ವಾಯು ಪಡೆಯ ವಿಶೇಷ ವಿಮಾನದಲ್ಲಿ ಹೊರಟು 11.10ಕ್ಕೆ ಕೊಯಮತ್ತೂರಿನ ಸೂಲೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅಲ್ಲಿಂದ 11.47ಕ್ಕೆ ವಾಯು ಪಡೆಯ ಹೆಲಿಕಾಪ್ಟರ್ (ಎಂಐ-17 ವಿ-5)ನಲ್ಲಿ ವೆಲ್ಲಿಂಗ್ಟನ್‍ಗೆ ಹೊರಟಿತ್ತು. ಇನ್ನು ಕೇವಲ 5 ನಿಮಿಷಗಳ ಪ್ರಯಾಣ ಬಾಕಿ ಇರುವಂತೆಯೇ ಮಧ್ಯಾಹ್ನ 12.20ರಲ್ಲಿ ಹೆಲಿಕಾಪ್ಟರ್ ಕಾಟೇರಿ ಗ್ರಾಮದ ಬಳಿ ಅರಣ್ಯದ ಎರಡು ಮರಗಳಿಗೆ ಡಿಕ್ಕಿ ಹೊಡೆದು ಪತನಗೊಂಡಿದೆ. (ಈ ದುರಂತ ಹವಾಮಾನ ವೈಪರೀತ್ಯದಿಂದ ನಡೆದಿದೆಯೇ? ಅಥವಾ ಹೆಲಿಕಾಪ್ಟರ್‍ನಲ್ಲಿ ದೋಷ ಕಾಣಿಸಿಕೊಂಡು ನಡೆದಿದೆಯೇ? ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.) ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಹೆಲಿಕಾಪ್ಟರ್ ಅನ್ನು ಕಂಡ ಗ್ರಾಮಸ್ಥರು ತಮ್ಮ ಮನೆಗಳಿಂದ ಬಿಂದಿಗೆ ಮತ್ತು ಬಕೆಟ್‍ಗಳಲ್ಲಿ ನೀರು ತಂದು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಭಾರೀ ಪ್ರಮಾಣದ ಬೆಂಕಿಯ ಜ್ವಾಲೆಯಿಂದ ಅದು ವಿಫಲವಾಯಿತು. ರಾವತ್ ಅವರ ಆಗಮನದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಪಹರೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ನೀಲಗಿರಿಯ ಅಗ್ನಿಶಾಮಕ ದಳ ಸಿಬ್ಬಂದಿ ಕೆಲವೇ ನಿಮಿಷದಲ್ಲಿ ಸ್ಥಳಕ್ಕಾಗಮಿಸಿದರಾದರೂ, ಹೆಲಿಕಾಪ್ಟರ್ ಪತನಗೊಂಡಿದ್ದ ಸ್ಥಳಕ್ಕೆ ವಾಹನಗಳ ಸಂಚಾರ ಸಾಧ್ಯವಿಲ್ಲದ ಕಾರಣ ಇಳಿಜಾರಿನ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿಯೇ ತೆರಳಿ ರಕ್ಷಣಾ ಕಾರ್ಯ ಆರಂಭಿಸಿದರು. ಆದರೆ ಬೆಂಕಿಯ ಜ್ವಾಲೆ ಮಿತಿ ಮೀರಿದ್ದರಿಂದ ಬೆಂಕಿ ನಂದಿಸಲು ವಿಳಂಬವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಿಪಿನ್ ರಾವತ್ ಸೇರಿ ಮೂವರು ಬದುಕುಳಿ ದಿದ್ದು, ಅವರನ್ನು ಸ್ಟ್ರೆಚರ್‍ನಲ್ಲಿ ರಸ್ತೆಗೆ ತಂದ ನಂತರ ವೆಲ್ಲಿಂಗ್ಟನ್ ಆಸ್ಪತ್ರೆಗೆ ರವಾನಿಸ ಲಾಯಿತಾದರೂ, ಬಿಪಿನ್ ರಾವತ್ ಸೇರಿದಂತೆ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಹೆಲಿಕಾಪ್ಟರ್‍ನ ಪೈಲಟ್ ಗ್ರೂಪ್ ಲೀಡರ್ ವರುಣ್ ಸಿಂಗ್ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 11 ಮಂದಿ ದೇಹಗಳು ಗುರುತು ಸಿಗದಷ್ಟು ಸುಟ್ಟು ಹೋಗಿದ್ದು, ಡಿಎನ್‍ಎ ಪರೀಕ್ಷೆಯಿಂದ ಅವರ ಗುರುತು ಪತ್ತೆ ಹಚ್ಚಬೇಕಾಗಿದೆ. ಆದರೆ ಸೂಲೂರು ವಿಮಾನ ನಿಲ್ದಾಣದಿಂದ ವೆಲ್ಲಿಂಗ್ಟನ್‍ಗೆ ಹೊರಟವರ ಪಟ್ಟಿ ಇದ್ದುದರಿಂದ ಮೃತಪಟ್ಟವರು ಯಾರೆಂಬುದು ತಿಳಿದಿದೆಯಾದರೂ, ಮೃತದೇಹಗಳ ಪತ್ತೆಗಾಗಿ ಡಿಎನ್‍ಎ ಪರೀಕ್ಷೆ ಮಾಡಲೇಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಾಥಮಿಕ ವರದಿಗಳ ವಿವರಣೆ ನೀಡಿದ ನಂತರ ದೆಹಲಿಯಲ್ಲಿರುವ ಬಿಪಿನ್ ರಾವತ್ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಘಟನೆ ಬಗ್ಗೆ ವಿವರಿಸಿ, ಸಂತಾಪ ಸೂಚಿಸಿದ್ದಾರೆ. ನಾಳೆ (ಗುರುವಾರ) ರಾಜನಾಥ ಸಿಂಗ್ ಅವರು ಸಂಸತ್‍ನ ಉಭಯ ಸದನಗಳಲ್ಲಿ ದುರಂತದ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದ್ದಾರೆ. ದೆಹಲಿಯಿಂದ ಸೇನಾಪಡೆಯ ಅಧಿಕಾರಿಗಳು ಈಗಾಗಲೇ ತಮಿಳುನಾಡಿಗೆ ತೆರಳಿದ್ದಾರೆ. ಈ ದುರಂತದ ಬಗ್ಗೆ ವಾಯು ಪಡೆ ;ಉನ್ನತ ಅಧಿಕಾರಿಗಳಿಂದ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ದುರಂತದ ಹಿನ್ನೆಲೆಯಲ್ಲಿ ಮೆಟ್ಟುಪಾಳ್ಯಂ ಮತ್ತು ನೀಲಗಿರಿ ನಡುವೆ ಅಧಿಕಾರಿ ವರ್ಗ ಹಾಗೂ ಆಂಬುಲೆನ್ಸ್ ಹೊರತುಪಡಿಸಿ ಇತರ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

Translate »