ಮೈಸೂರು ಲಾಡ್ಜ್‍ನಲ್ಲಿ ಹಣಕಾಸು ಸಂಸ್ಥೆ ಉದ್ಯೋಗಿ ನಿಗೂಢ ಸಾವು ಪ್ರಕರಣ ಕಣ್ಮರೆಯಾದ ಪತ್ನಿ 10 ದಿನವಾದರೂ ಪತ್ತೆಯಿಲ್ಲ
ಮೈಸೂರು

ಮೈಸೂರು ಲಾಡ್ಜ್‍ನಲ್ಲಿ ಹಣಕಾಸು ಸಂಸ್ಥೆ ಉದ್ಯೋಗಿ ನಿಗೂಢ ಸಾವು ಪ್ರಕರಣ ಕಣ್ಮರೆಯಾದ ಪತ್ನಿ 10 ದಿನವಾದರೂ ಪತ್ತೆಯಿಲ್ಲ

January 12, 2021

ಮೈಸೂರು,ಜ.11(ಆರ್‍ಕೆ)-ಮೈಸೂರಿನ ಲಾಡ್ಜ್‍ವೊಂದರಲ್ಲಿ ಬೆಂಗಳೂರು ಹಣಕಾಸು ಸಂಸ್ಥೆಯ ಉದ್ಯೋಗಿ ಎಸ್.ಉಮಾಶಂಕರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಅದೇ ದಿನ ಕಣ್ಮರೆಯಾದ ಅವರ ಪತ್ನಿ ಶ್ರೀಮತಿ ಎ.ಎಂ.ಕವಿತಾ ಅವರು 10 ದಿನವಾದರೂ ಪತ್ತೆಯಾಗದಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.

2021ರ ಜ.1ರಂದು ಪ್ರಥಮ ಪಿಯುಸಿ ಓದುತ್ತಿರುವ ಪುತ್ರಿಯನ್ನು ಮೈಸೂರಿಗೆ ಕರೆತಂದು ಜಯನಗರದ ತಾಯಿ ಮನೆಗೆ ಬಿಟ್ಟು ಅದೇ ದಿನ ಬೆಂಗಳೂರಿಗೆ ಹೋಗು ವುದಾಗಿ ಹೇಳಿ ಪತ್ನಿ ಉಮಾಶಂಕರ್‍ರೊಂದಿಗೆ ಬಂದು ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಲಾಡ್ಜ್‍ವೊಂದರಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಕವಿತಾ, ಡೆತ್‍ನೋಟ್‍ಗೆ ಇಬ್ಬರೂ ಸಹಿ ಮಾಡಿ ಚುಚ್ಚುಮದ್ದು ತೆಗೆದುಕೊಂಡು ಪತಿ ಸಾವನ್ನಪ್ಪಿದ್ದರೂ, ಮರುದಿನ (ಜ.2) ಮುಂಜಾನೆ ಲಾಡ್ಜ್‍ನಿಂದ ಹೊರ ಹೋದವರು 10 ದಿನವಾದರೂ ಸುಳಿವೇ ಇಲ್ಲ.

ಹಣಕಾಸು ವಿಷಯದ ಸಂಬಂಧ ಸಾಲ ಕೊಟ್ಟವರ ಕಿರುಕುಳದಿಂದ ತಾವು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪತಿ-ಪತ್ನಿ ಡೆತ್‍ನೋಟ್ ಬರೆದು ಅದಕ್ಕೆ ಸಹಿ ಮಾಡಿದ್ದರಾದರೂ, ಉಮಾಶಂಕರ್ ಸಾವನ್ನಪ್ಪಿ, ಕವಿತಾ ಕಣ್ಮರೆಯಾಗಿರುವುದರಿಂದ ಘಟನೆ ನೈಜ ಸ್ಥಿತಿ ಏನೆಂಬುದು ಪೊಲೀಸರಿಗೆ ತಿಳಿದಿಲ್ಲ. ಆಕೆಯ ಪತ್ತೆಗಾಗಿ ಮಂಡಿ ಠಾಣೆ ಪೊಲೀಸರು ಬೆಂಗಳೂರು, ತಮಿಳುನಾಡು-ಕೇರಳ ಗಡಿ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದರಿಂದ ಟವರ್ ಲೊಕೇಷನ್ ಲಭ್ಯವಾಗುತ್ತಿಲ್ಲ, ಬಸ್ಸು ಅಥವಾ ರೈಲಿನಲ್ಲಿ ಹೋಗಿರಬಹುದೆಂದು ಊಹಿಸಿ ಪೊಲೀಸರು ಶೋಧ ನಡೆಸುತ್ತಿದ್ದು, ಅತ್ತ ಆಕೆಯ ತಾಯಿ ಮನೆ ಹಾಗೂ ಗಂಡನ ಮನೆಯವರೂ ಕವಿತಾಳಿಗಾಗಿ ಹುಡುಕಾಡುತ್ತಿದ್ದಾರೆ. ಆಕೆ ಜೀವಂತವಾಗಿ ಪತ್ತೆಯಾದರೆ ಮಾತ್ರ ಆತ್ಮಹತ್ಯೆ ಪ್ರಕರಣದ ನಿಜ ಸಂಗತಿ ತಿಳಿಯಲಿದೆ. ನಮ್ಮ ತಂಡದ ಸಿಬ್ಬಂದಿ ಜನ ವರಿ 2ರಿಂದಲೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕವಿತಾ ಸುಳಿವು ಸಿಕ್ಕಿಲ್ಲ ಎಂದು ಮಂಡಿ ಠಾಣೆ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ತಿಳಿಸಿದ್ದಾರೆ.

Translate »