ಕಾನೂನುಬಾಹಿರವಾಗಿ ಕೆಲಸದಿಂದ ವಜಾ ಆರೋಪ; ಕಾರ್ಮಿಕರ ಪ್ರತಿಭಟನೆ 
ಮೈಸೂರು

ಕಾನೂನುಬಾಹಿರವಾಗಿ ಕೆಲಸದಿಂದ ವಜಾ ಆರೋಪ; ಕಾರ್ಮಿಕರ ಪ್ರತಿಭಟನೆ 

January 12, 2021

ಮೈಸೂರು, ಜ.11(ಪಿಎಂ)- ಕಾನೂನುಬಾಹಿರ ವಾಗಿ 250 ಖಾಯಂ ಕಾರ್ಮಿಕರನ್ನು ಕೆಲಸ ದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿ ರೀಡ್ ಅಂಡ್ ಟೇಲರ್ (ಕ್ರಿಹಾನ್ ಟೆಕ್ಸ್‍ಕೆಮ್) ಕಾರ್ಖಾನೆಯ ಕೆಲಸ ಕಳೆದುಕೊಂಡ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿ ಯನ್‍ನಡಿ ಜಮಾಯಿಸಿದ ಕಾರ್ಮಿಕರು, ಸುಮಾರು 820 ಕಾರ್ಮಿಕರು 22 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆಡಳಿತ ವರ್ಗ 2020ರ ಮಾ.17ರಂದು ಕೋವಿಡ್ ನೆಪ ದಲ್ಲಿ ವೇತನ ಸಹಿತ ರಜೆ ಘೋಷಣೆ ಮಾಡಿತು. ಬಳಿಕ ಎನ್‍ಸಿಎಲ್‍ಟಿ ನ್ಯಾಯಾಲಯ ನೇಮಕ ಮಾಡಿದ್ದ ಲಿಕ್ವಿಡೇಟರ್ ಅವರ ಮೂಲಕ ಎಲ್ಲಾ ಕಾರ್ಮಿಕರನ್ನು 2020ರ ಮೇ 15ರಂದು ಕಾನೂನುಬಾಹಿರವಾಗಿ ವಿಸರ್ಜನೆ ಮಾಡಿಸ ಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಾಲೀಕರೇ ಹೊಸ ಹೆಸರಿನಲ್ಲಿ ಕಾರ್ಖಾನೆ ಖರೀದಿಸಿ ಕೆಲವು ಕಾರ್ಮಿಕರೊಂದಿಗೆ ಕಾನೂನು ಬಾಹಿರವಾಗಿ ಒಳಒಪ್ಪಂದ ಮಾಡಿಕೊಂಡು 565 ಕಾರ್ಮಿಕರನ್ನು ಮಾತ್ರ ಮತ್ತೆ ನೇಮಕ ಮಾಡಿ ಕೊಂಡು ಕಾರ್ಖಾನೆ ನಡೆಸುತ್ತಿದ್ದಾರೆ. ಆದರೆ ಉಳಿದ 250 ಕಾರ್ಮಿಕರಿಗೆ ಕಾನೂನುಬಾಹಿರ ವಾಗಿ ಕೆಲಸ ನಿರಾಕರಣೆ ಮಾಡಿ, ಬೀದಿಪಾಲು ಮಾಡಲಾಗಿದೆ ಎಂದು ಆರೋಪಿಸಿದರು.

ಮತ್ತೆ ಕೆಲಸಕ್ಕೆ ನೇಮಕಗೊಂಡವರ ವೇತನದಲ್ಲಿ ಕಡಿತ ಮಾಡಿ, ಕೆಲಸ ಕಳೆದುಕೊಂಡ ಕಾರ್ಮಿಕ ರಿಗೆ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಇದ ರಿಂದ 22 ವರ್ಷಗಳು ಕೆಲಸ ಮಾಡಿದ ಕಾರ್ಮಿಕ ರಿಗೆ ಕೆಲಸ ಹಾಗೂ ಸೂಕ್ತ ಪರಿಹಾರ ಎರಡೂ ಇಲ್ಲದಂತಾಗಿದೆ. ಖಾಯಂ ಕಾರ್ಮಿಕರಾದ ನಮಗೆ ಕೆಲಸ ನೀಡದೇ ಹೊರ ರಾಜ್ಯದಿಂದ ಗುತ್ತಿಗೆಯಡಿ ಕಾರ್ಮಿಕರನ್ನು ಕರೆತಂದು ಕೆಲಸ ಕೊಟ್ಟಿದ್ದಾರೆ ಎಂದು ದೂರಿದರು. ಕಾರ್ಮಿಕ ಮುಖಂಡರಾದ ಮಹದೇವ, ಗೋವಿಂದಸ್ವಾಮಿ, ಗಾಡಿ ರವಿ, ಸುನಿತಾಬಾಯಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »