ಬೆಂಗಳೂರು,ನ.4(ಕೆಎಂಶಿ)-ದೀಪಾವಳಿ ವೇಳೆಗೆ ಪಟಾಕಿ ಸಿಡಿಸುವುದನ್ನು ನಿಷೇ ಧಿಸಲು ಸರ್ಕಾರ ಮುಂದಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುತ್ತದೆ ಎಂದು ತಜ್ಞರು ಶಂಕಿ ಸಿದ್ದಾರೆ. ಅದಕ್ಕೆಂದೇ ತಜ್ಞರ ಸಮಿತಿ ರಚಿಸಿದ್ದು, ಒಂದೆರಡು ದಿನದಲ್ಲಿ ವರದಿ ನೀಡಲಿದ್ದಾರೆ. ಆ ವರದಿ ಆಧಾ ರದ ಮೇಲೆ ಪಟಾಕಿ ನಿಷೇಧ ಮಾಡುವ ಸಂಬಂಧ ಸರ್ಕಾರ ತೀರ್ಮಾನ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಸೇರುವ ಜನ ಜಂಗುಳಿಯಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಈಗ ಮತ್ತೊಂದು ಆತಂಕವೂ ಸರ್ಕಾರಕ್ಕೆ ಎದುರಾಗಿದೆ ಎಂದರು. ಮೈಸೂರು ದಸರಾ ಸರಳವಾಗಿ ಆಚರಿಸಲಾಗಿದೆ. ಅದೇ ಮಾದರಿಯಲ್ಲಿ ಸಂಪ್ರದಾಯಗಳಿಗೆ ಅಡ್ಡಿಯಾಗದಂತೆ ಸರಳ ರೀತಿಯಲ್ಲಿ ಹಬ್ಬ ಆಚರಿಸುವ ಸಂಬಂಧ ಸರ್ಕಾರ ಕೆಲವು ಸಲಹೆ ಸೂಚನೆ ಗಳನ್ನು ನೀಡಲಿದೆ ಎಂದರು. ರಾಜ್ಯದಲ್ಲಿ ಶೇ.16ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸೇರೋ ಸರ್ವೇಯಲ್ಲಿ ತಿಳಿದು ಬಂದಿದೆ ಎಂದರು.
ಮುಂಬೈ, ಪುಣೆ, ದೆಹಲಿ ನಗರಗಳಲ್ಲಿ ಸರ್ವೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಎಲ್ಲ 30 ಜಿಲ್ಲೆಗಳಲ್ಲೂ ಸರ್ವೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲೂ
ಸರ್ವೆ ನಡೆದಿದೆ. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಿದ್ದು, 15,624 ಜನರ ಫಲಿತಾಂಶ ಬಂದಿದೆ. ಹಿಂದೆ ಹಾಗೂ ಸರ್ವೆ ಮಾಡುವ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದವರ ಒಟ್ಟು ಪ್ರಮಾಣ 27.3%ರಷ್ಟಿದೆ ಎಂದರು.
ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಣ ಮಾಡಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ವೈರಸ್ ದೇಹಕ್ಕೆ ಬಂದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿ ಯಾಗುತ್ತದೆ. ಐಜಿಜಿ ಹೊಂದಿದವರು ಹಾಗೂ ಸಕ್ರಿಯ ಸೋಂಕಿತರನ್ನು ಪತ್ತೆ ಮಾಡುವ ಮೂಲಕ ಈ ಸರ್ವೆಯನ್ನು ಕ್ರಮಬದ್ಧವಾಗಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ 16.4% ಇದೆ. ಅಂದರೆ ಇಷ್ಟು ಜನರು ಸೋಂಕಿಗೊಳಗಾಗಿ ಗುಣಮುಖರಾಗಿದ್ದಾರೆ. ಈ ಪ್ರಮಾಣ ದೆಹಲಿಯಲ್ಲಿ 29.1%, ಮುಂಬೈ ಸ್ಲಮ್ ರಹಿತ ಪ್ರದೇಶಗಳಲ್ಲಿ 16% ಹಾಗೂ ಸ್ಲಮ್‍ಗಳಲ್ಲಿ 57%, ಪುಣೆಯ 5 ಪ್ರದೇಶಗಳಲ್ಲಿ 36.1 ರಿಂದ 65.4%, ಇಂದೋರ್‍ನಲ್ಲಿ 7.8%, ಪಾಂಡಿಚೇರಿ ಯಲ್ಲಿ 22.7%, ಚೆನ್ನೈನಲ್ಲಿ 32.3% ಇದೆ. 15,624 ಜನರಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7%ರಷ್ಟಿದೆ ಎಂದರು. ಈ ಸರ್ವೆ 2020ರ ಸೆಪ್ಟೆಂಬರ್ 3ರಿಂದ 16ರವರೆಗೆ ನಡೆದಿತ್ತು. ಕೋವಿಡ್ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ 0.05% ಇದೆ. ಮುಂಬೈಯಲ್ಲಿ 0.05-0.10%, ಪುಣೆಯಲ್ಲಿ 0.08%, ದೆಹಲಿಯಲ್ಲಿ 0.09%, ಚೆನ್ನೈನಲ್ಲಿ 0.13% ಮರಣ ಪ್ರಮಾಣವಿದೆ ಎಂದರು. ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು. ಹೆಚ್ಚು ಪರೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮಕೈಗೊಳ್ಳುವುದು, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿ ಮಾಡಲು ಈ ಸರ್ವೆ ನೆರವಾಗಲಿದೆ.
ರಾಜ್ಯದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಗುಣಮುಖರ ಪ್ರಮಾಣ 95% ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ಮೇಲೆ ನಿಗಾ ಇರಿಸಲು ಪುನರ್ವಸತಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.