ಮೊದಲ ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನ  ಪಡೆದ ಸಾವಿರಾರು ಭಕ್ತರು
ಮೈಸೂರು

ಮೊದಲ ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ಸಾವಿರಾರು ಭಕ್ತರು

July 2, 2022

ಮೈಸೂರು,ಜು.1(ಎಂಟಿವೈ)- ಎರಡು ವರ್ಷಗಳ ನಂತರ ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜಾ ವೈಭವ. ಮೊದಲ ಶುಕ್ರವಾರವಾದ ಇಂದು ಜರುಗಿದ ವಿಶೇಷ ಪೂಜಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ಕೊರೊನಾ ಸೋಂಕಿನ ಆತಂಕದಿಂದಾಗಿ ಕಳೆದ ಎರಡು ವರ್ಷಗಳಿಂದ ಆಷಾಢ ಮಾಸದ ವಿಶೇಷ ಪೂಜಾ ಮಹೋತ್ಸವ ಕೇವಲ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡಿತ್ತು. ಈಗ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸಾಲಿನ ಆಷಾಢ ಮಾಸದ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರ ವೇರಿಸುವುದರೊಂದಿಗೆ ಭಕ್ತರು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಕ್ತಿ ದೇವತೆಯ ಆರಾಧನೆಯ ಮಾಸವಾದ ಆಷಾಢ ಶುಕ್ರವಾರದಂದು ನಾಡದೇವಿ ದರ್ಶನ ಪಡೆದು ಇಷ್ಟಾರ್ಥಸಿದ್ದಿಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲು ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು.

ವಿಶೇಷ ಪೂಜೆ: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ದೇವಾಲಯದ ಪ್ರಧಾನ ಆಗಮಿಕ ಡಾ. ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನಾಡದೇವಿಗೆ ವಿವಿಧ ಅಭಿಷೇಕ ಮಾಡಿ ಪೂಜೆ ನೆರವೇರಿಸಿದರು. ಮುಂಜಾನೆ 3.30ರಿಂದಲೇ ದೇವಿಗೆ ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ಬಳಿಕ ಕ್ರೀಮ್ ಕಲರ್ ರೇಷ್ಮೆ ಸೀರೆಯಿಂದ ಅಲಂಕರಿಸಿ, ಬಿಳಿ ಬಣ್ಣದ ವಿವಿಧ ಹೂವು ಗಳಿಂದ ಅಲಂಕಾರ ಮಾಡಲಾಗಿತ್ತು. ಅಂತಿಮವಾಗಿ ಮಹಾಲಕ್ಷ್ಮೀ ಅಲಂಕಾರ ಮಾಡಿ, ಮಹಾಮಂಗಳಾರತಿ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಮುಂಜಾನೆ 5.30ರಿಂದ ರಾತ್ರಿ 9.30ರವರೆಗೂ ದರ್ಶನ: ಧಾರ್ಮಿಕ ಕಾರ್ಯ ಮುಗಿದ ನಂತರ ಮುಂಜಾನೆ 5.30ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾ ಯಿತು. ಬೆಳಗ್ಗೆ 9.30ಕ್ಕೆ ದೇವಾಲಯದ ಪ್ರಾಂಗಣದಲ್ಲೇ ಉತ್ಸವ ಮೂರ್ತಿ ಮೆರವಣಿಗೆ ಮಾಡಿ ಸಂಪ್ರದಾಯ ದಂತೆ ಪೊಲೀಸ್ ಪೇದೆಯಿಂದ ಗನ್ ಸೆಲ್ಯೂಟ್ ಗೌರವ ಸಮರ್ಪಿಸಲಾಯಿತು. ನಂತರ ರಾತ್ರಿ 9.30 ರವರೆಗೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಂಜಾನೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದು ದೇವಿಯ ದರ್ಶನ ಪಡೆದರು.

ರಾತ್ರಿಯಿಡೀ ಜಾಗರಣೆ: ಮೊದಲ ಆಷಾಢ ಶುಕ್ರವಾರ ದೇವಿಯ ದರ್ಶನಕ್ಕೆ ಬಂದ ಭಕ್ತರು ರಾತ್ರಿಯಿಡೀ ದೇವಾಲಯದ ಮುಂದೆ
ಜಾಗರಣೆ ಮಾಡಿದ್ದಾರೆ. ಎರಡು ವರ್ಷದ ಬಳಿಕ ನಡೆಯುತ್ತಿರುವ ವಿಶೇಷ ಪೂಜಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ರಾತ್ರಿಯೇ ಮೈಸೂರಿಗೆ ಬಂದಿದ್ದ ಭಕ್ತರು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಬಂದು ಗುರುವಾರ ರಾತ್ರಿ 10 ಗಂಟೆಯಿಂದಲೇ ದೇವಾಲಯದ ಮುಂಭಾಗ ಸರದಿ ಸಾಲಿನಲ್ಲಿ ನಿಂತಿದ್ದರು. ಮುಂಜಾನೆ 5.30ಕ್ಕೆ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ದೇವಾಲಯ ಪ್ರವೇಶಿಸಿ, ದರ್ಶನ ಪಡೆಯುವ ಮೂಲಕ ಭಕ್ತಿ ಮೆರೆದರು.

ಕಟ್ಟುನಿಟ್ಟಿನ ಕ್ರಮ: ಚಾಮುಂಡಿಬೆಟ್ಟದಲ್ಲಿ ಪೊಲೀಸರು ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮದಿಂದಾಗಿ ದೇವಾಲಯದ ಸುತ್ತಮುತ್ತ ಅನಗತ್ಯ ಗುಂಪುಗೂಡುವಿಕೆಗೆ ಕಡಿವಾಣ ಬಿದ್ದಿತ್ತು. ಪ್ರತಿ ವರ್ಷ ದೇವಾಲಯ ಮುಖ್ಯ ದ್ವಾರದಿಂದ ನುಸುಳುವ ಪ್ರಯತ್ನ ಮಾಡುತ್ತಿದ್ದರು. ಇದರಿಂದ ಕೆಲವು ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಬಾರಿ ದೇವಾಲಯದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿದ್ದರಿಂದ ಭಕ್ತರು ನಿಗದಿತ ಸಾಲಿನಲ್ಲೇ ದೇವಾಲಯಕ್ಕೆ ಪ್ರವೇಶ ಪಡೆದು, ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಬಿಗಿ ಪೊಲೀಸ್ ಭದ್ರತೆ: ಚಾಮುಂಡಿಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಅಶ್ವರೋಹಿ ದಳದ ಸಿಬ್ಬಂದಿಯನ್ನು ದೇವಾಲಯದ ಸುತ್ತಲೂ ಗಸ್ತಿಗಾಗಿ ನಿಯೋಜಿಸಲಾಗಿತ್ತು. ಅಲ್ಲದೆ ಜೇಬುಗಳ್ಳರು, ಸರಗಳ್ಳರ ಹಾವಳಿ ಹತ್ತಿಕ್ಕಲು ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಸಾರಿಗೆ ಬಸ್ ವ್ಯವಸ್ಥೆ: ಕೆಲವು ವರ್ಷಗಳಿಂದ ಆಚರಣೆಯಲ್ಲಿರುವಂತೆ ಈ ಬಾರಿಯೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಪಕ್ಕದ ಮೈದಾನದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿ, ಅಲ್ಲಿಂದಲೇ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾಡಳಿತದಿಂದ 50 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್ ಟೆಸ್ಟ್: ಕೋವಿಡ್ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಎರಡು ಡೋಸ್ ಲಸಿಕೆ ಕಡ್ಡಾಯ. ಲಸಿಕೆ ಪಡೆಯದೇ ಇರುವವರು 72 ಗಂಟೆ ಅವಧಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ರಿಪೋರ್ಟ್ ತರಬೇಕೆಂಬ ನಿಯಮ ಜಾರಿಗೊಳಿಸಿದ್ದರಿಂದ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮೈದಾನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಪಾಸಣೆಗೆ ಸಿಬ್ಬಂದಿ ನೇಮಿಸಲಾಗಿತ್ತು. ಅಲ್ಲದೆ ಆರ್‍ಟಿಪಿಸಿಆರ್ ಕೌಂಟರ್ ತೆರೆದು ಕೋವಿಡ್ ಪರೀಕ್ಷೆ ಮಾಡಿ ಬೆಟ್ಟಕ್ಕೆ ಹೋಗಲು ಅನುಮತಿ ನೀಡಲಾಗುತ್ತಿತ್ತು.

ಕೋವಿಡ್ ಪರೀಕ್ಷೆಗೆ ಅಂಜಿದ ಭಕ್ತರು: ಚಾಮುಂಡಿಬೆಟ್ಟಕ್ಕೆ ಹೋಗಬೇಕೆಂದು ಉತ್ಸಾಹದಿಂದ ಬಂದಿದ್ದ ಭಕ್ತರು ಕೋವಿಡ್ ನೆಗೆಟಿವ್ ರಿಪೋರ್ಟ್ ಕೇಳುತ್ತಿದ್ದಂತೆ ಲಲಿತಮಹಲ್ ಪ್ಯಾಲೇಸ್ ಮೈದಾನದಿಂದ ವಾಪಸ್ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಈ ಹಿಂದೆ ಉಚಿತ ಸೇವೆಗಾಗಿ 25-30 ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ 50 ಬಸ್ ವ್ಯವಸ್ಥೆ ಮಾಡಿದ್ದರಿಂದ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಬೆಟ್ಟದಲ್ಲೂ ಭಕ್ತರ ಸಂಖ್ಯೆ ಹಿಂದಿನ ವರ್ಷಗಳಿಗಿಂತ ವಿರಳವಾಗಿತ್ತು.

ಅನ್ನ ದಾಸೋಹ: ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಮೊದಲ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ 35 ಸಾವಿರ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಮುಂಜಾನೆಯಿಂದಲೇ ಭಕ್ತರಿಗೆ ಉಪಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿ, ಹಾರ್ಲಿಕ್ಸ್ ಮೈಸೂರು ಪಾಕ್ ವಿತರಿಸಲಾಯಿತು.

ಶಾಸಕರ ಭೇಟಿ: ಚಾಮುಂಡಿಬೆಟ್ಟಕ್ಕೆ ಇಂದು ಬೆಳಗ್ಗೆ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಬೆಟ್ಟಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ನಳನಳಿಸಿದ ದೇವಾಲಯ: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯವನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮುಂಜಾನೆಯ ಮಂಜಿನಲ್ಲಿ, ವಿದ್ಯುತ್ ದೀಪಗಳ ಬೆಳಕಿನಲ್ಲಿ ಶೃಂಗಾರಗೊಂಡಿದ್ದ ದೇವಾಲಯವನ್ನು ಭಕ್ತರು ಕಣ್ತುಂಬಿಕೊಂಡರು.

Translate »