ಮೈಸೂರಲ್ಲಿ ಪ್ರಥಮ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಿ ಸ್ಮಾರಕಾರ್ಥ ವಾಟರ್ ಥೀಮ್ ಪಾರ್ಕ್
ಮೈಸೂರು

ಮೈಸೂರಲ್ಲಿ ಪ್ರಥಮ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಿ ಸ್ಮಾರಕಾರ್ಥ ವಾಟರ್ ಥೀಮ್ ಪಾರ್ಕ್

June 25, 2020
  • ಸದ್ದಿಲ್ಲದೆ ಮೈಸೂರು ನಗರಪಾಲಿಕೆ ಸಿದ್ಧತೆ
  • ವಿನ್ಯಾಸ, ಡಿಪಿಆರ್ ತಯಾರಿಸಲು ಕನ್ಸಲ್ಟೆನ್ಸಿಗೆ ಟೆಂಡರ್
  • ವಾಣಿ ವಿಲಾಸ ವಾಟರ್ ವಕ್ರ್ಸ್ ಮುಂಭಾಗ ರಾಜಮಾತೆಯವರ ಭವ್ಯ ಪ್ರತಿಮೆ ನಿರ್ಮಾಣ

ಮೈಸೂರು, ಜೂ.24(ಆರ್‍ಕೆ)-ಪ್ರಥಮ ರಾಜಮಾತೆ ಪೂಜ್ಯ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿ ಅವರ ಭವ್ಯ ಪ್ರತಿಮೆಯೊಂದಿಗೆ ಮೈಸೂರಿನಲ್ಲಿ ವಾಟರ್ ಥೀಮ್ ಪಾರ್ಕ್ ನಿರ್ಮಿ ಸಲು ಮೈಸೂರು ಪಾಲಿಕೆ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ. ಮೈಸೂರಿನ ಕೆಆರ್‍ಎಸ್ ರಸ್ತೆಯ ವಾಣಿ ವಿಲಾಸ ವಾಟರ್ ವಕ್ರ್ಸ್ ಎದುರು ಸಿಎಫ್‍ಟಿಆರ್‍ಐ ಕಾಂಪೌಂಡ್ ಪಕ್ಕ ದಲ್ಲಿರುವ 2 ಎಕರೆ ಕಟ್ಟೆ ಜಾಗದಲ್ಲಿ 2ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಕರ್ಷಕ ಹಾಗೂ ಸುಂದರ ವಾಟರ್ ಪಾರ್ಕ್ ನಿರ್ಮಿಸಿ, ಪ್ರವಾಸಿಗರ ಆಕರ್ಷಿಸಲು ದ್ದೇಶಿಸಲಾಗಿದೆ ಎಂದು ಮೇಯರ್ ತಸ್ನೀಂ ತಿಳಿಸಿದರು.

ಮೈಸೂರಿನ ವಾಣಿವಿಲಾಸ ವಾಟರ್‍ವಕ್ರ್ಸ್ ಆವರಣದಲ್ಲಿರುವ ನವೀಕೃತ ಸಭಾಂಗಣದಲ್ಲಿ ಇಂದು ಉದ್ದೇಶಿತ ವಾಟರ್ ಥೀಮ್ ಪಾರ್ಕ್ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಅದರ ವಿನ್ಯಾಸ, ವೈಶಿಷ್ಟ್ಯತೆಗಳ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ವೀಕ್ಷಿಸಿದರು. ಪಾರ್ಕ್‍ನಲ್ಲಿ ಪಾರಂಪರಿಕ ಶೈಲಿಯ ವಿವಿಧ ಯೋಗ ಭಂಗಿಗಳ ಪ್ರತಿಮೆಗಳು, ಅಂದಿನ ಮೈಸೂರು ಪ್ರಥಮ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರ ಬೃಹತ್ ಪ್ರತಿಮೆ ಸ್ಥಾಪಿಸಲು ಚಿಂತನೆ ನಡೆಸಿದೆಯಲ್ಲದೆ, ಎತ್ತರದ ಸ್ತಂಭವನ್ನು ನಿರ್ಮಿಸಿ ಅದರಲ್ಲಿ ಕಾವೇರಿ ಮಾತೆಯ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಕೆರೆ ಅಭಿವೃದ್ಧಿ, ಮಕ್ಕಳಿಗಾಗಿ ಕಿಡ್ಸ್ ಪಾರ್ಕ್, ಮಳೆ ನೀರು ಕೊಯ್ಲು ಮಾದರಿಗಳನ್ನು ನಿರ್ಮಿಸಿ, ಈ ಪಾರ್ಕ್‍ನಿಂದ ವಾಣಿವಿಲಾಸ ವಾಟರ್ ವಕ್ರ್ಸ್ ಆವರಣಕ್ಕೆ ಸಂಪರ್ಕ ಕಲ್ಪಿಸಲು ಕೆಆರ್‍ಎಸ್ ರಸ್ತೆಗೆ ಅಡ್ಡಲಾಗಿ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದ ತಸ್ನೀಂ ಅವರು, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ರೈಲ್ವೇ ಮ್ಯೂಸಿಯಂ ನೋಡಿಕೊಂಡು ಪಕ್ಕದಲ್ಲೇ ವಾಟರ್ ಥೀಮ್ ಪಾರ್ಕ್‍ಗೂ ಭೇಟಿ ನೀಡುವಂತೆ ಈ ಈ ಸ್ಥಳವನ್ನು ಆಕರ್ಷಕ, ರಮಣೀಯ ರೀತಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ನಾಗರಾಜಮೂರ್ತಿ, ವಾಟರ್ ಪಾರ್ಕ್ ಅಭಿ ವೃದ್ಧಿಗೆ ಪ್ರಸಕ್ತ ಸಾಲಿನ ಪಾಲಿಕೆ ಆಯ-ವ್ಯಯದಲ್ಲಿ 2 ಕೋಟಿ ರೂ. ಅನುದಾನ ಮೀಸ ಲಿರಿಸಲಾಗಿದೆ ಎಂದರು. ಈಗಾಗಲೇ ವಿನ್ಯಾಸ, ರೂಪುರೇಷೆಗಳೊಂದಿಗೆ ವಾಟರ್ ಥೀಮ್ ಪಾರ್ಕ್ ಯೋಜನೆಗೆ ಡಿಪಿಆರ್(Detailed Project Report) ತಯಾರಿಸಲು 4 ಲಕ್ಷ ರೂ.ಗಳಿಗೆ ಕನ್ಸಲ್ಟೆನ್ಸಿ ಟೆಂಡರ್ ಕರೆಯಲಾಗಿದೆ. ಈ ಕ್ಷೇತ್ರದಲ್ಲಿ ನುರಿತ ಸಂಸ್ಥೆ ಯಿಂದ ಡಿಪಿಆರ್ ತಯಾರಿಸಿ ಯೋಜನೆಯನ್ನು ಒಂದೂವರೆ ವರ್ಷದಲ್ಲಿ ಪೂರ್ಣ ಗೊಳಿಸಲುದ್ದೇಶಿಸಲಾಗಿದೆ ಎಂದರು. ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ, ವಿವಿಧ ಯೋಗ ಭಂಗಿ, ಕಾವೇರಿ ಮಾತೆಯ ಪ್ರತಿಮೆಗಳನ್ನು ನಿರ್ಮಿಸಲು ಮೈಸೂರಿನ ಶಿಲ್ಪಕಲಾವಿದ, ಅರುಣ್ ಶಿಲ್ಪಿ ಅವರು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದರು.

Translate »