ಮೈಸೂರು, ಜು.26(ಎಂಟಿವೈ)-ಮೈಸೂರಿನಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಭಾನುವಾರ 31 ವರ್ಷದ ಯುವಕ, ಮೂವರು ವೃದ್ಧೆಯರು, ಓರ್ವ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದರಿಂದ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿಕೆಯಾಗಿದ್ದು, ಹೊಸದಾಗಿ 230 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದ ರೊಂದಿಗೆ ಸೋಂಕಿತರ ಸಂಖ್ಯೆ 2867ಕ್ಕೆ ಏರಿದೆ.
ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ಕೊರೊನಾಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, 2ನೇ ಬಾರಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದೆ. ಅಲ್ಲದೇ ಸಾವಿನ ಸರಣಿಯೂ ಮುಂದು ವರೆದಿದ್ದು, 31 ವರ್ಷದ ಯುವಕ, 70, 59, 64 ವರ್ಷದ ವೃದ್ಧೆಯರು ಹಾಗೂ 70 ವರ್ಷದ ವೃದ್ಧರೊಬ್ಬರು ಶನಿವಾರ ರಾತ್ರಿ ಸೋಂಕಿಗೆ ಮೃತಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕು ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ 112ಕ್ಕೆ ಏರಿದೆ.
ಇಂದು 15 ಮಂದಿ ಸೇರಿದಂತೆ ಈವರೆಗೆ 823 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 1932 ಸಕ್ರಿಯ ಸೋಂಕಿತರ ಪೈಕಿ 210 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 56 ಮಂದಿ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್‍ನಲ್ಲಿ, 527 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 210 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 852 ಮಂದಿ ಹೋಂ ಐಸೋಲೇಷನ್‍ನಲ್ಲಿ ಹಾಗೂ 71 ಮಂದಿ ಖಾಸಗಿ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದಾರೆ.
ರಾಜ್ಯದಲ್ಲಿ ಇಂದು 5199 ಮಂದಿಗೆ ಸೋಂಕು ತಗು ಲಿದ್ದು, ಸೋಂಕಿತರ ಸಂಖ್ಯೆ 96,141ಕ್ಕೆ ಏರಿಕೆ ಆಗಿದೆ. ಇಂದು 82 ಮಂದಿ ಮೃತಪಟ್ಟಿದ್ದು, ಈವರೆಗೆ ರಾಜ್ಯದಲ್ಲಿ ಸೋಂಕಿನಿಂದ 1878 ಮಂದಿ ಸಾವನ್ನಪ್ಪಿದಂತಾಗಿದೆ. 58,417 ಸಕ್ರಿಯ ಸೋಂಕಿತರ ಪೈಕಿ 632 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜನಗರದಲ್ಲಿ ಇಂದು 31 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 506ಕ್ಕೆ ಏರಿಕೆ ಆಗಿದೆ. ಇಂದು 17 ಸೇರಿದಂತೆ ಈವರೆಗೆ 288 ಮಂದಿ ಗುಣಮುಖ ರಾಗಿದ್ದು, ಇದುವರೆಗೆ 6 ಮಂದಿ ಮೃತಪಟ್ಟಿದ್ದಾರೆ. 212 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಕೊಡಗಿನಲ್ಲಿ ಐವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆಯಾಗಿದೆ. ಭಾನುವಾರ ಓರ್ವರು ಮೃತಪಟ್ಟಿದ್ದು, ಈವರೆಗೆ 6 ಮಂದಿ ಸೋಂಕಿ ನಿಂದ ಮೃತಪಟ್ಟಂತಾಗಿದೆ.
ಒಟ್ಟು 249 ಮಂದಿ ಗುಣಮುಖರಾಗಿದ್ದು, 93 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡ್ಯದಲ್ಲಿ ಇಂದು 64 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆಯಾಗಿದೆ. ಓರ್ವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ 10 ಮಂದಿ ಮೃತಪಟ್ಟಂತಾಗಿದೆ. ಇಂದು 25 ಸೇರಿದಂತೆ ಒಟ್ಟು 808 ಮಂದಿ ಗುಣಮುಖರಾಗಿದ್ದಾರೆ. 373 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನದಲ್ಲಿ ಇಂದು 164 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1672ಕ್ಕೆ ಏರಿದೆ. ಇಂದು ಮೂವರು ಮೃತಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆ ಆಗಿದೆ. 753 ಮಂದಿ ಗುಣಮುಖರಾಗಿದ್ದು, 877 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.