ಬೆಂಗಳೂರು: ಕೊರೊನಾ ಮಹಾಮಾರಿ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಬ್ರೇಕ್ ಹಾಕಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸಪಡುತ್ತಿದೆ. ಆದರೆ ಇತ್ತ ಉದ್ಯಾನ ನಗರಿಯಲ್ಲಿ ಬರೋಬ್ಬರಿ 3,338 ಕೊರೊನಾ ಸೋಂಕಿತರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 45,453 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 33,156 ಸಕ್ರಿಯ ಪ್ರಕರಣಗಳು ಇವೆ. ಅಲ್ಲದೇ ಸುಮಾರು 11,405 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ ಮಾರಕ ವೈರಾಣುವಿಗೆ 895 ಜನ ಅಸುನೀಗಿದ್ದಾರೆ. ಈ ಮಧ್ಯೆ ಸುಮಾರು 3,338 ಕೋವಿಡ್-19 ಸೋಂಕಿತರು ನಾಪತ್ತೆಯಾಗಿರುವುದು ಸರ್ಕಾರವನ್ನು ತೀವ್ರ ಚಿಂತೆಗೀಡು ಮಾಡಿದೆ.
ವಿಳಾಸ, ಮೊಬೈಲ್ ನಂಬರ್ ನಕಲಿ: ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರ ಪೈಕಿ ಹಲವರು ತಮ್ಮ ಸರಿಯಾದ ವಿಳಾಸ ಹಾಗೂ ಇತರ ಮಾಹಿತಿ ನೀಡದೇ ತಪ್ಪಿಸಿ ಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಭಾಗಿಯಾಗಿ ಪಾಸಿಟಿವ್ ಎಂದು ಘೋಷಣೆಯಾದ ಒಟ್ಟು 3,338 ಜನ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾರೆ. ಪರೀಕ್ಷೆ ಸಮಯದಲ್ಲಿ ತಮ್ಮ ಮನೆಯ ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿಗಳನ್ನು ಸರಿಯಾಗಿ ನೀಡದೇ, ಪಾಸಿಟಿವ್ ಬಂದಾಕ್ಷಣ ಇವರು ನಾಪತ್ತೆಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಸೋಂಕಿ ತರ ಹುಡುಕಾಟಕ್ಕೆ ಚಾಲನೆ ನೀಡಲಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿಯನ್ನಾಧರಿಸಿ ಶೋಧಕಾರ್ಯ ಆರಂಭಿಸಲಾಗಿದೆ. ನಾಪತ್ತೆಯಾದವರು ನಗರದಲ್ಲೇ ಇದ್ದಾರಾ ಅಥವಾ ಬೇರೆ ಊರುಗಳಿಗೆ ಹೋಗಿದ್ಧಾರಾ ಎಂಬುದು ತಿಳಿಯದಾಗಿದ್ದು, ಸೋಂಕಿತರ ಈ ಬೇಜವಾಬ್ದಾರಿ ವರ್ತನೆ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯವನ್ನು ಮತ್ತಷ್ಟು ಅಪಾಯಕ್ಕೆ ದೂಡಿದೆ.
ಸೋಂಕಿತರ ಪತ್ತೆಗೆ ತಂಡ ರಚನೆ: ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್, ನಾಪತ್ತೆಯಾಗಿರುವ ಸೋಂಕಿತರ ಪತ್ತೆಗೆ ತಂಡ ರಚಿಸಲಾಗಿದೆಯಾದರೂ, ಸೋಂಕಿತರು ನೀಡಿರುವ ಸುಳ್ಳು ಮಾಹಿತಿ ಆಧಾರದ ಮೇಲೆ ಹುಡುಕುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.