ಕೊರೊನಾ ಎಫೆಕ್ಟ್: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಶೇ.50ರಷ್ಟು ಚಟುವಟಿಕೆ ಕಡಿತ
ಮೈಸೂರು

ಕೊರೊನಾ ಎಫೆಕ್ಟ್: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಶೇ.50ರಷ್ಟು ಚಟುವಟಿಕೆ ಕಡಿತ

July 27, 2020

ಮೈಸೂರು, ಜು.26- ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರೊಂದಿಗೆ ದಿನಕ್ಕೆ ಶೇ.50ರಷ್ಟು ಚಟುವಟಿಕೆ ಸ್ಥಗಿತಗೊಳಿಸಿ ಜನಜಂಗುಳಿ ತಡೆಗೆ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿದೆ.

ಮೈಸೂರಲ್ಲಿರುವ ಪೂರ್ವ ಮತ್ತು ಪಶ್ಚಿಮ ಪ್ರಾದೇ ಶಿಕ ಸಾರಿಗೆ ಕಚೇರಿಗಳಲ್ಲಿ ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ವಿವಿಧ ಉದ್ದೇಶಕ್ಕೆ ಆಗಮಿಸುತ್ತಿದ್ದರು. ಆದರೆ ಕೋವಿಡ್‍ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ವಾಗಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರದ ಸೂಚನೆ ಮೇರೆಗೆ ಆರ್‍ಟಿಓ ಕಚೇರಿ ಚಟುವಟಿಕೆಯನ್ನು ಶೇ.50ರಷ್ಟಕ್ಕೆ ಮಾತ್ರ ಸೀಮಿತ ಗೊಳಿಸಲಾಗಿದ್ದು, ಅನಗತ್ಯವಾಗಿ ಕಚೇರಿಗೆ ಬರುವವರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಲಾಕ್‍ಡೌನ್ ವೇಳೆ ಆರ್‍ಟಿಓ ಕಚೇರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಲಾಕ್ ಡೌನ್ ಸಡಿಲಿಕೆ ನಂತರ ಎರಡೂ ಕಚೇರಿಗಳು ಕಾರ್ಯಾರಂಭ ಮಾಡಿದ್ದವು. ಆದರೆ ಇತ್ತೀಚೆಗೆ ಮೈಸೂರು ಒಳಗೊಂಡಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಯಲ್ಲಿ ಮತ್ತಷ್ಟು ಬಿಗಿ ನಿಲುವು ಕೈಗೊಳ್ಳಲಾಗಿದ್ದು, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದರೊಂದಿಗೆ ಕಚೇರಿಗೆ ಬರುವ ಸಾರ್ವ ಜನಿಕರು ಹಾಗೂ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಅಗತ್ಯವಾಗಿ ಬರುವ ಸಾರ್ವಜನಿಕರಿಗೆ ಎರಡೂ ಪ್ರವೇಶ ನಿರ್ಬಂಧಿಸ ಲಾಗಿದೆ. ಇದರಿಂದ ಸುರಕ್ಷಿತ ಕ್ರಮದೊಂದಿಗೆ ಆರ್‍ಟಿಓ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಸಾಮಾಜಿಕ ಅಂತರ: ಲಾಕ್‍ಡೌನ್ ಸಡಿಲಿಕೆ ಆರಂಭ ದಲ್ಲಿಯೇ ಪ್ರಾದೇಶಿಕ ಸಾರಿಗೆ ಸಂಸ್ಥೆಯ ಪೂರ್ವ ಮತ್ತು ಪಶ್ಚಿಮ ಕಚೇರಿಗಳಲ್ಲಿ ಸಾರ್ವಜನಿಕರು ಸರದಿ ಸಾಲಿ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗುರುತು ಮಾಡಲಾಗಿತ್ತು. ಅಲ್ಲದೆ ಕಚೇರಿಗೆ ಬರುವವ ರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ, ದೇಹದ ಉಷ್ಣಾಂಶ ಸಾಮಾನ್ಯವಾಗಿದ್ದರೆ ಮಾತ್ರ ಕಚೇರಿಗೆ ಬರಲು ಅವಕಾಶ ನೀಡಲಾಗುತ್ತದೆ. ಇದರಿಂದ ಕಚೇರಿ ಆವರಣದಲ್ಲಿ ಈ ಹಿಂದೆ ಕಂಡು ಬರುತ್ತಿದ್ದ ಜನಜಂಗುಳಿಗೆ ಕಡಿವಾಣ ಬಿದ್ದಂತಾಗಿದೆ.

ಆನ್‍ಲೈನ್‍ಮಯ: ಇದೇ ಮೊದಲ ಬಾರಿಗೆ ಆನ್‍ಲೈನ್ ನೋಂದಣಿ ಯಾವುದೇ ತಾಂತ್ರಿಕ ಸಮಸ್ಯೆಗೆ ತುತ್ತಾಗದೇ ಸುಲಲಿತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆಯೇ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿತ್ತಾಗಿದ್ದರೂ ತಾಂತ್ರಿಕ ದೋಷಕ್ಕೆ ಒಳಗಾಗಿ ಪದೇ ಪದೇ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಇದೀಗ ಆನ್‍ಲೈನ್ ವ್ಯವಸ್ಥೆ ಸರಾಗವಾಗಿ ಸಾಗುತ್ತಿದೆ. ಇದರಿಂದ ಗುಂಪುಗೂಡುವಿಕೆಗೆ ಕಡಿವಾಣ ಹಾಕಿದಂತಾಗಿದೆ. ಚಾಲನೆ ಕಲಿಕಾ ಪ್ರಮಾಣ ಪತ್ರ(ಎಲ್‍ಎಲ್‍ಆರ್), ಚಾಲನಾ ಪರವಾನಗಿ(ಡಿಎಲ್) ಹಾಗೂ ಡಿಎಲ್ ರಿನಿವಲ್‍ಗಾಗಿ ಆನ್‍ಲೈನ್ ಮೂಲಕ ಆರ್‍ಟಿಓ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿದರಿಗೆ ಮಾತ್ರ ಕಚೇರಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಇದು ಕಚೇರಿಯಲ್ಲಿ ಕೊರೊನಾ ಸೋಂಕು ತಡೆಗೆ ಸಹಕಾರಿಯಾಗುತ್ತಿದೆ.

ವಿಂಗಡಣೆ: ಆರ್‍ಟಿಓ ಪೂರ್ವ ಕಚೇರಿಯಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ವಿಶಾಲ ಕಟ್ಟಡದೊಂದಿಗೆ ಹಲವು ವಿಭಾಗಗಳಿಗೆ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿದೆ. ಈ ಎಲ್ಲಾ ಕೊಠಡಿಗಳ ಮುಂದೆ ಪ್ರತಿ ದಿನ ಹಲವು ಮಂದಿ ದಾಖಲೆ ಪ್ರತಿ ಹಿಡಿದುಕೊಂಡು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಇದೀಗ ಕಚೇರಿಯೊಳಗೆ ನೇರವಾಗಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಬದಲಾಗಿ ಕಚೇರಿ ಹೊರಗೆ ಕಿಟಕಿ ಬಳಿಯೇ ಕ್ಯಾಮರಾ ಅಳವಡಿಸಲಾಗಿದ್ದು, ಅರ್ಜಿದಾರರ ಭಾವಚಿತ್ರ ತೆಗೆದು ಮುಂದಿನ ಹಂತಕ್ಕೆ ರವಾನಿಸಲಾಗುತ್ತಿದೆ. ಆನ್‍ಲೈನ್‍ನಲ್ಲಿ ನಮೂದಾಗದೇ ಇದ್ದವರಿಗೆ ಆಫ್‍ಲೈನ್‍ನಲ್ಲಿ ಶುಲ್ಕ ಪಾವತಿಸಲು ಚೆಲನ್ ಕಟ್ಟಲು, ಫೋಟೋ ತೆಗೆದುಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಈ ವ್ಯವಸ್ಥೆಯಿಂದ ಸಿಬ್ಬಂದಿ ಹಾಗೂ ಅರ್ಜಿದಾರರಿಗಿದ್ದ ಆತಂಕ ನಿವಾರಣೆಯಾದಂತಾಗಿದೆ.

ಈ ಮೊದಲು ದಿನವೊಂದರಲ್ಲಿ 150ಕ್ಕೂ ಹೆಚ್ಚು ಮಂದಿ ಡಿಲ್, ಎಲ್‍ಎಲ್‍ಆರ್ ಪರೀಕ್ಷೆ ಎದುರಿಸುತ್ತಿದ್ದರು. ಆನ್‍ಲೈನ್‍ನಲ್ಲಿ 80 ಮಂದಿಗೆ ಅಪಾಯ್ಟ್‍ಮೆಂಟ್ ನೀಡಲಾಗುತ್ತಿದೆ. ಅದರಲ್ಲಿ 30ರಿಂದ 40 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಎರಡು ದಿನ ಮಾತ್ರ 50 ಮಂದಿ ಪರೀಕ್ಷೆಗೆ ಹಾಜರಾಗಿರುವುದನ್ನು ಹೊರತು ಪಡಿಸಿದರೆ ಉಳಿದ ದಿನಗಳಂದ ಕೇವಲ 30ರಿಂದ 40 ಮಂದಿಯಷ್ಟೇ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಗೈರು ಹಾಜರಾದವರ ಅಪಾಯ್ಟ್‍ಮೆಂಟ್ ರದ್ದಾಗಲಿದೆ.

ಎಫ್‍ಸಿಗೆ ಕಾಲಾವಕಾಶ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಪಾದನೆ ಇಲ್ಲದ ಕಾರಣ ವಾಹನ ಮಾಲೀಕರಿಗೆ ಎಫ್‍ಸಿಗೆ ರಾಜ್ಯ ಸರ್ಕಾರ ಸೆಪ್ಟಂಬರ್‍ವರೆಗೂ ವಿನಾಯಿತಿ ನೀಡಿರುವುದ ರಿಂದ ಆರ್‍ಟಿಓ ಕಚೇರಿಗಳಿಗೆ ಎಫ್‍ಸಿಗಾಗಿ ಬರುವವರ ಸಂಖ್ಯೆ ಕ್ಷೀಣಿಸಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಎಫ್‍ಸಿ ಮಾಡಿಸಲು ಬರುತ್ತಿದ್ದಾರೆ. ಸರ್ಕಾರ ನೀಡಿರುವ ವಿನಾಯಿತಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ವಾಹನ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ವಾಹನ ಮಾಲೀಕತ್ವದ ವರ್ಗಾವಣೆ ಪ್ರಕ್ರಿಯೆ ಮಾತ್ರ ಭರದಿಂದ ಸಾಗುತ್ತಿದೆ. ಆಫ್‍ಲೈನ್ ಮೂಲಕವೇ(ನೇರವಾಗಿ ಕಚೇರಿಗೆ ಬಂದು) ಮಾಲೀಕತ್ವ ವರ್ಗಾವಣೆ ಮಾಡಲಾಗುತ್ತಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »