ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿ ಐದು ಬಡಾವಣೆ ವಿವಾದ ಜೂನ್ ಆಯ್ತು…! `ಬಿ ಖರಾಬು ಮುಕ್ತ’ ಏನಾಯ್ತು!!?
ಮೈಸೂರು

ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿ ಐದು ಬಡಾವಣೆ ವಿವಾದ ಜೂನ್ ಆಯ್ತು…! `ಬಿ ಖರಾಬು ಮುಕ್ತ’ ಏನಾಯ್ತು!!?

July 1, 2020

ಮೈಸೂರು, ಜೂ.30(ಆರ್‍ಕೆಬಿ)- ಮೈಸೂ ರಿನ ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನ ಹಳ್ಳಿ, ಆದಾಯ ತೆರಿಗೆ ಬಡಾವಣೆ ಜೂನ್ ಅಂತ್ಯಕ್ಕೆ `ಬಿ’ ಖರಾಬು ಮುಕ್ತಗೊಳ್ಳಲಿದೆ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್ ಅಚಲ ಭರವಸೆ ನೀಡಿದ್ದರು.

ಇತ್ತೀಚೆಗೆ ಅವರು ಸುದ್ದಿಗೋಷ್ಠಿಯಲ್ಲಿ, ಈ ಐದು ಬಡಾವಣೆಗಳಿರುವ ಒಟ್ಟು 354.29 1/2 ಎಕರೆ ಪ್ರದೇಶವನ್ನು `ಬಿ’ ಖರಾಬಿನಿಂದ ಕೈಬಿಡಲು ಕ್ರಮ ಕೈಗೊಳ್ಳು ವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರು ಸಂಬಂಧಿಸಿದ ಇಲಾಖೆ ಗಳಿಗೆ ನಿರ್ದೇಶನ ನೀಡಿದ್ದಾರೆ. ಜೂನ್ ತಿಂಗಳ ಕೊನೆಯಲ್ಲಿ ಕಂದಾಯ ಸಚಿ ವರು, ಜಿಲ್ಲಾ ಉಸ್ತುವಾರಿ ಸಚಿವರು, 5 ಬಡಾವಣೆಗಳ ಸಂಘ-ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿ `ಬಿ’ ಖರಾಬು ಮುಕ್ತಗೊಳಿ ಸಿದ ಆದೇಶ ಪ್ರತಿ ಕೊಡುವ ಕಾರ್ಯ ಕ್ರಮ ಏರ್ಪಡಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು.

`ಬಿ’ ಖರಾಬು ವಿಚಾರವಾಗಿ ನ್ಯಾಯಾ ಲಯದಲ್ಲಿರುವ ಇತರೆ ಪ್ರಕರಣಗಳು ಹಾಗೂ ಈ ಬಡಾವಣೆಗಳಿಗೂ ಯಾವುದೇ ಸಂಬಂಧವಿಲ್ಲ. ಸರ್ವೇ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿ ಯಲ್ಲಿ ಈ ಬಡಾವಣೆಗಳಿರುವ ಹಿನ್ನೆಲೆ ಯಲ್ಲಿ ಸಮಸ್ಯೆ ಉದ್ಭವಿಸಿತ್ತು. ಆದರೆ ಎಲ್ಲಾ ಅಡತಡೆಗಳೂ ನಿವಾರಣೆಯಾಗಿದ್ದು, ಜೂನ್ ತಿಂಗಳಾಂತ್ಯಕ್ಕೆ ಎಲ್ಲವೂ ಸರಿ ಯಾಗಲಿದೆ ಎಂದು ಸಾರ್ವಜನಿಕರಿಗೆ ಅಭಯ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆ ಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕುರು ಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೆ ನಂ.41ಕ್ಕೆ ಸೇರಿದ 354 ಎಕರೆ ಪ್ರದೇಶದ ಬಗ್ಗೆ ಗೊಂದಲ ಸೃಷ್ಟಿಸಬೇಡಿ. ಜನರಿಗೆ ನಿಜ ಸಂಗತಿ ತಿಳಿಸಿ. ಸುಳ್ಳು ಹೇಳುವ ಮೂಲಕ ಅವರ ಪರಿಸ್ಥಿತಿಯನ್ನು ಅಣ ಕಿಸಬೇಡಿ ಎಂದು ಬಿಜೆಪಿ ಮುಖಂಡರಿಗೆ ಛಾಟಿ ಬೀಸಿದ್ದರು.

ಶಾಸಕ ರಾಮದಾಸ್ ಮತ್ತು ಮಾಜಿ ಎಂಎಲ್‍ಸಿ ಗೋ.ಮಧುಸೂದನ್ ಒಂದು ತಿಂಗಳ ಒಳಗಾಗಿ ಸರ್ಕಾರ ಆದೇಶ ಹೊರ ಡಿಸುವಂತೆ ಮಾಡಿ, ಜನರಿಗೆ ನೆಮ್ಮದಿ ನೀಡಲಿ. ಬಿಜೆಪಿ ಸರ್ಕಾರ ಮಾಡಿದ ಅಚಾತುರ್ಯವನ್ನು ಬಿಜೆಪಿ ಸರ್ಕಾರವೇ ಸರಿಪಡಿಸಬೇಕು. ಅದನ್ನು ಬಿಟ್ಟು ಬರೀ ನಾಟಕ ಬೇಡ. ಈ ವಿಷಯದಲ್ಲಿ ಸುಳ್ಳು ಹೇಳುವುದು ಸರಿಯಲ್ಲ. ಭರವಸೆ ನೀಡಿ ರುವಂತೆ ಒಂದು ತಿಂಗಳ ಒಳಗಾಗಿ ಸರ್ಕಾರ ದಿಂದ ಆದೇಶ ಹೊರಡಿಸುವಂತೆ ಮಾಡಿ, ಜನರಿಗೆ ನೆಮ್ಮದಿ ತರದಿದ್ದರೆ ಕಾಂಗ್ರೆಸ್ ವತಿಯಿಂದ ರಾಮದಾಸ್ ಮತ್ತು ಗೋ. ಮಧುಸೂದನ್ ನಿವಾಸದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ರಾಜಕಾರಣಿಗಳ ಭರವಸೆಯನ್ನು ನಂಬಿ ಹಲವು ವರ್ಷಗಳಿಂದ ತಾಳ್ಮೆಯಿಂದ ಕಾದಿ ರುವ ಈ ಐದು ಬಡಾವಣೆಗಳ ನಿವಾಸಿ ಗಳಲ್ಲಿ ಮತ್ತೊಂದು ಭರವಸೆ ಬೆಳಕು ಮೂಡಿತ್ತು. ರಾಮದಾಸ್ ಅವರು ಹೇಳಿದಂತೆ ಮಾಡಿಯೇ ಮಾಡುತ್ತಾರೆಂದು ನಂಬಿ ದ್ದರು. ಆದರೆ ಜೂನ್ ತಿಂಗಳು ಮುಗಿ ದರೂ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ರಾಮದಾಸ್ ಅವರೂ ಮಾತ ನಾಡಿಲ್ಲ. ಅತ್ತ ಹೋರಾಟದ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ವಕ್ತಾರರೂ ಮೌನ ವಾಗಿದ್ದಾರೆ. ಈ ಇಬ್ಬರ ಹೇಳಿಕೆಗಳ ಬಗ್ಗೆ ಸಂಕಷ್ಟಕ್ಕೀಡಾಗಿರುವ ನಿವಾಸಿಗಳು ಸ್ಪಷ್ಟನೆ ಕೇಳುತ್ತಿದ್ದಾರೆ. `ಜೂನ್ ಆಯ್ತು…! `ಬಿ’ ಖರಾಬು ಮುಕ್ತ ಏನಾಯ್ತು…’ ಎಂದು ಪ್ರಶ್ನಿಸಿ, ಉತ್ತರದ ನಿರೀಕ್ಷೆಯಲ್ಲಿದ್ದಾರೆ.