ಇಂದು 18-44 ವರ್ಷದವರಿಗೆ  ಲಸಿಕೆ ಅಭಿಯಾನಕ್ಕೆ ಚಾಲನೆ
ಮೈಸೂರು

ಇಂದು 18-44 ವರ್ಷದವರಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ

June 21, 2021

ಮೈಸೂರು,ಜೂ.20(ಎಂಟಿವೈ)-ಕೊರೊನಾ ಸೋಂಕಿ ನಿಂದ ಪಾರಾಗಲು ಲಸಿಕೆಯೊಂದೇ ಅಂತಿಮ ಮಾರ್ಗ ವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ನಾಳೆ(ಜೂ.21) ಯಿಂದ 18-44 ವರ್ಷದ 15,95,881 ಮಂದಿಗೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನ ಆರಂಭವಾಗ ಲಿದೆ. ನಗರ ಸೇರಿದಂತೆ ಜಿಲ್ಲೆಯ 177 ಕೇಂದ್ರಗಳಲ್ಲಿ ದಿನಕ್ಕೆ 25 ಸಾವಿರ ಮಂದಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಂಡಿದ್ದರೆ, ಪಾಲಿಕೆ ವತಿಯಿಂದ ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಕುಟುಂಬದ ಸದಸ್ಯರಿಗಾಗಿ ವಿಶೇಷ ಅಭಿಯಾನದ ಮೂಲಕ 20 ಸಾವಿರ ಮಂದಿಗೆ ಲಸಿಕೆ ಹಾಕಲು ಕ್ರಮ ಕೈಗೊಂಡಿದೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯ ಲಿದೆ. ಮೈಸೂರು ಜಿಲ್ಲೆಯಲ್ಲೂ 18-44 ವರ್ಷದವ ರಿಗೆ ಲಸಿಕೆ ಹಾಕಲು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅಭಿಯಾನದ ಆರಂಭದ ಮೊದಲ ದಿನವಾದ ನಾಳೆ ಒಂದೇ ದಿನ ಜಿಲ್ಲೆಯಲ್ಲಿ 45 ಸಾವಿರ ಜನರಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 25 ಸಾವಿರ ಮಂದಿ ಹಾಗೂ ಪಾಲಿಕೆ ವತಿಯಿಂದ 20 ಸಾವಿರ ಮಂದಿಗೆ ಲಸಿಕೆ ಹಾಕಿ, ಜಿಲ್ಲೆಯಲ್ಲಿ ಎಲ್ಲರಿಗೂ ತ್ವರಿತಗತಿ ಯಲ್ಲಿ ಲಸಿಕೆ ಹಾಕಿಸುವ ಗುರಿ ಸಾಧಿಸಲು ಮುಂದಾಗಿದೆ.

ಮೈಸೂರು ಜಿಲ್ಲೆಯ 34 ಲಕ್ಷ ಜನಸಂಖ್ಯೆ ಪೈಕಿ, 60 ವರ್ಷ ಮೇಲ್ಪಟ್ಟ 2.79 ಲಕ್ಷ ಹಿರಿಯ ನಾಗರಿ ಕರಿದ್ದು, ಅವರಲ್ಲಿ 2,88,257 ಮಂದಿಗೆ ಮೊದಲ ಡೋಸ್ ಹಾಗೂ 85415 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಏ.1ರಿಂದ 45 ವರ್ಷ ಮೇಲ್ಪಟ್ಟ ವರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 8,80,107 ಜನರಿದ್ದು, ಇದುವರೆಗೆ 6,52, 995 ಮಂದಿಗೆ ಮೊದಲ ಡೋಸ್, 1,29,217 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

18-44 ವರ್ಷ ವಯೋಮಾನದ 15,95,881 ಜನ ರಿದ್ದು, ಫ್ರಂಟ್‍ಲೈನ್ ವರ್ಕರ್ಸ್ ಹಾಗೂ ಮುಂಚೂಣಿ ಕಾರ್ಯಕರ್ತರ ವರ್ಗಕ್ಕೆ ಸೇರಿದ 1,50,808 ಮಂದಿಗೆ ಈಗಾಗಲೇ ಮೊದಲ ಡೋಸ್ ಲಸಿಕೆ ನೀಡಿದ್ದರೆ, 6 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಇನ್ನು 14,45,073 ಮಂದಿಗೆ ಲಸಿಕೆ ಹಾಕಬೇಕಾಗಿದ್ದು, ನಾಳೆ ಯಿಂದ ಸರ್ಕಾರ ವತಿಯಿಂದ ಉಚಿತವಾಗಿ ಲಸಿಕೆ ದೊರೆಯಲಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಲಭ್ಯವಿದ್ದು, ನಿಗದಿತ ದರ ಪಾವತಿಸಬೇಕಾಗಿದೆ.

177 ಕೇಂದ್ರದಲ್ಲಿ: ಮೈಸೂರು ನಗರದಲ್ಲಿನ 28 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ ರುವ 166 ಪ್ರಾಥಮಿಕ ಆರೋಗ್ಯ ಕೇಂದ್ರ, 9 ಸಮು ದಾಯ ಆರೋಗ್ಯ ಕೇಂದ್ರ, 6 ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಪಂಚಕರ್ಮ ಆಸ್ಪತ್ರೆ ಸೇರಿದಂತೆ 177 ಕೇಂದ್ರಗಳಲ್ಲಿ ನಾಳೆಯಿಂದ 18-44 ವರ್ಷದೊಳಗಿನವರಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಒಂದೊಂದು ಕೇಂದ್ರದಲ್ಲೂ ಕನಿಷ್ಠ 150ರಿಂದ 500 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸರ್ಕಾರ ಜಿಲ್ಲಾಡಳಿತಕ್ಕೆ ದಿನವೊಂದಕ್ಕೆ 25 ಸಾವಿರ ಮಂದಿಗೆ ಲಸಿಕೆ ಹಾಕುವಂತೆ ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಸಿಕಾ ಅಭಿ ಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ: ಮೈಸೂರು ಮಹಾನಗರ ಪಾಲಿಕೆ ನಾಳೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಫ್ರಂಟ್‍ಲೈನ್ ವರ್ಕರ್ಸ್, ವಿವಿಧ ಇಲಾಖಾ ಸಿಬ್ಬಂದಿ ಗಳಿಗಾಗಿ ಆಯೋಜಿಸಿರುವ ವಿಶೇಷ ಅಭಿಯಾನ ದಲ್ಲಿ ನಾಳೆ ಒಂದೇ ದಿನ 20 ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಪಾಲಿಕೆಯ ಎಡಿಸಿ ಎನ್.ಎಂ.ಶಶಿಕುಮಾರ್ ನೋಡಲ್ ಅಧಿಕಾರಿಯಾಗಿ ನಿಯೋಜಿಸಿದ್ದು, ಪಾಲಿಕೆ ಸಿಬ್ಬಂದಿ, ವಾಣಿವಿಲಾಸ ವಾಟರ್ ವಕ್ರ್ಸ್ ಸಿಬ್ಬಂದಿ, ಇಂಜಿನಿಯರಿಂಗ್ ವಿಭಾಗ, ಶಿಕ್ಷಕರು ಹಾಗೂ ಪೊಲೀಸರು ಹಾಗೂ ಕುಟುಂಬದ ಸದಸ್ಯರಿಗಾಗಿ ಪ್ರತ್ಯೇಕ ಸ್ಥಳದಲ್ಲಿ ಲಸಿಕಾ ಅಭಿಯಾನ ನಡೆಸಲು 7 ತಂಡ ರಚಿಸಲಾಗಿದೆ. ಈ ಏಳು ತಂಡಕ್ಕೂ ಒಬ್ಬೊಬ್ಬರು ಅಧಿಕಾರಿಗೆ ನೇತೃತ್ವ ವಹಿಸಲಾಗಿದ್ದು, ಪೊಲೀಸರಿಗೆ ಡಿಎಆರ್ ಮೈದಾನ, ಶಿಕ್ಷಕರಿಗೆ ಶಿಕ್ಷಕರ ಭವನ ಸೇರಿದಂತೆ ವಿವಿಧೆಡೆ ಕೊರೊನಾ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ.

ಬೀದಿಬದಿ ವ್ಯಾಪಾರಿಗಳಿಗೂ ಪ್ರತ್ಯೇಕ ವ್ಯವಸ್ಥೆ: ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಮೈಸೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಸೂಚಿಸಿರುವ ಮೇರೆಗೆ 4 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತ್ಯೇಕ ಸ್ಥಳದಲ್ಲಿ ಲಸಿಕೆ ಹಾಕಲಾಗುತ್ತದೆ. ಕೃಷ್ಣರಾಜ ಕ್ಷೇತ್ರದ ವ್ಯಾಪಾರಿಗಳು ಸ್ಟರ್ಲಿಂಗ್ ಥಿಯೇಟರ್ ಹಿಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಲಸಿಕೆ ಹಾಕಲಾಗುತ್ತದೆ. ಈ ಕೇಂದ್ರಕ್ಕೆ ವಲಯ-2 ಎಸಿ ನಂಜುಂಡೇಗೌಡ (97424 54353) ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. ಚಾಮರಾಜ ಕ್ಷೇತ್ರದ ವ್ಯಾಪಾರಿಗಳಿ ಗಾಗಿ ಪುರಭವನದಲ್ಲಿ ಲಸಿಕೆ ಹಾಕಲಾಗುತ್ತದೆ. ಮೇಲುಸ್ತುವಾರಿಯಾಗಿ ವಲಯ-6 ಎಸಿ ಮಂಜುನಾಥ್(8660150889), ನರಸಿಂಹರಾಜ ಕ್ಷೇತ್ರದ ವ್ಯಾಪಾರಿಗಳಿಗೆ ಉದಯಗಿರಿಯ ಮಹದೇವಪುರ ರಸ್ತೆಯಲ್ಲಿರುವ ಜಬ್ಬಾರ್ ಫಂಕ್ಷನ್ ಹಾಲ್‍ನಲ್ಲಿ ಲಸಿಕಾ ಅಭಿಯಾನ ನಡೆಯಲಿದ್ದು, ವಲಯ-8ರ ಎಸಿ ಶಿವಕುಮಾರ್(9900684767) ಮೇಲುಸ್ತುವಾರಿಯಾಗಿ ನಿಯೋಜಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪಾರಿಗ ಳಿಗಾಗಿ ರಾಮಕೃಷ್ಣನಗರದ ಐ-ಬ್ಲಾಕ್‍ನಲ್ಲಿರುವ ರಾಮಕೃಷ್ಣ ಪರಮಹಂಸ ಪಾರ್ಕ್‍ನಲ್ಲಿ ವಲಯ-3ರ ಎಸಿ ಸತ್ಯಮೂರ್ತಿ(9731398207) ಮೇಲುಸ್ತುವಾರಿಯಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ. ವ್ಯಾಪಾರಿಗಳು ಆಧಾರ್ ಕಾರ್ಡ್, ಪಿ.ಎಂ.ಸ್ವಾ-ನಿಧಿ ಯೋಜನೆಯಡಿ ನೀಡಲಾಗಿರುವ ಶಿಫಾರಸ್ಸು ಪತ್ರ ಅಥವಾ ಗುರುತಿನ ಚೀಟಿ ತೆಗೆದುಕೊಂಡು ಬರುವಂತೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Translate »