ರಮಾಬಾಯಿನಗರದವರ ನೀರಿನ ದರ ಕಡಿತಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
ಮೈಸೂರು

ರಮಾಬಾಯಿನಗರದವರ ನೀರಿನ ದರ ಕಡಿತಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

August 12, 2022

ಮೈಸೂರು, ಆ.11- ಇಂದು ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ನಿವಾರಣೆ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚರ್ಚಿಸಿದರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಂಬಂಧಿಸಿದ ಸ್ಥಳಿಯ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿಸಲ್ಪಟ್ಟ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಮಾಬಾಯಿನಗರ ನಿವಾಸಿಗಳಿಗೆ ನಗರಪಾಲಿಕೆ ಅವೈಜ್ಞಾನಿಕವಾಗಿ ನೀರಿನ ದರವನ್ನು ನಿಗದಿಪಡಿಸಿದೆ ಎಂದು ಅಲ್ಲಿನ ನಿವಾಸಿಗಳು ಶಾಸಕ ಜಿ.ಟಿ.ದೇವೇಗೌಡರ ಗಮನಕ್ಕೆ ತಂದಿದ್ದರು. ಈ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಜಿಟಿಡಿ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ರಮಾಬಾಯಿನಗರ ನಿವಾಸಿಗಳಿಗೆ ಅವೈಜ್ಞಾನಿಕವಾಗಿ ನಿಗದಿಪಡಿಸಿರುವ ನೀರಿನ ದರವನ್ನು ಪರಿಷ್ಕರಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ಅಲ್ಲಿನ ನಿವಾಸಿಗಳು ಪರಿಷ್ಕøತ ನೀರಿನ ದರ ಪಾವತಿಸಿಕೊಂಡು ಖಾತೆ ಮಾಡಿ ಕಂದಾಯ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು. ಆದ್ದರಿಂದ ರಮಾ ಬಾಯಿ ನಗರ ನಿವಾಸಿಗಳು ಆತಂಕ ಪಡಬೇಕಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮಹದೇವಪುರ, ಲಿಂಗಾಂಬುದಿ, ಪರಸಯ್ಯನಹುಂಡಿ, ಟೆಂಪಲ್ ಬಿಲ್ ಬಡಾವಣೆ, ವಿಶ್ವ ವಿದ್ಯಾನಿಲಯ ಬಡಾವಣೆಗಳಿಗೆ ಕಬಿನಿ ನೀರು ಪೂರೈಸುವ ಕಾಮಗಾರಿ ಕೈಗೊಂಡು ಆಗಸ್ಟ್ ಅಂತ್ಯದೊಳಗೆ ಈ ಬಡಾವಣೆಗಳಿಗೆ ಕಬಿನಿ ನೀರು ಪೂರೈಸಬೇಕೆಂದು ಮುಖ್ಯಮಂತ್ರಿಗಳು ಪಾಲಿಕೆ ಆಯುಕ್ತರು ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿರುವ ಜಿ.ಟಿ.ದೇವೇಗೌಡರು ಈ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ಶೀಘ್ರದಲ್ಲೇ ಕಂದಾಯ ಅದಾಲತ್ ನಡೆಸಿ, ಖಾತೆ ಮಾಡಿ ಕಂದಾಯವನ್ನು ಸ್ಥಳದಲ್ಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Translate »