ಮೈಸೂರು, ಆ.11(ಆರ್‍ಕೆ)-ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರು ವಾರ ನಡೆದ ಯುವಜನ ಮಹೋತ್ಸವದಲ್ಲಿ ಹಿಂದೆಂದೂ ಕಂಡರಿಯದಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮದಲ್ಲಿ ಮಿಂದೆದ್ದರು. ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾ ನಿಲಯವು ಏರ್ಪಡಿಸಿದ್ದ ಯುವಜನ ಮಹೋ ತ್ಸವ ಸಮಾರಂಭದಲ್ಲಿ ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ಪದವಿ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕøತಿಕ ಉತ್ಸವಕ್ಕೆ ಈ ಪ್ರಮಾಣ ದಲ್ಲಿ ಜಮಾವಣೆಯಾಗಿದ್ದುದು ಇಡೀ ರಾಜ್ಯದಲ್ಲೇ ಪ್ರಥಮವಾಗಿದ್ದು, ಇತಿಹಾಸ ನಿರ್ಮಾಣವಾಗಿದೆ ಎಂದು ವೇದಿಕೆ ಮೇಲಿದ್ದ ಗಣ್ಯರೇ ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹೋತ್ಸವ ಉದ್ಘಾಟಿಸಿ ವಿದ್ಯಾರ್ಥಿ ಗಳನ್ನುದ್ದೇಶಿಸಿ ಸ್ಫೂರ್ತಿದಾಯಕ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್, ಸಂಸದ ಪ್ರತಾಪ್‍ಸಿಂಹ, ಶಾಸಕ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್‍ಕುಮಾರ್, ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಯುವಜನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದುದು ವಿಶೇಷವಾಗಿತ್ತು. ಪ್ರತೀ ಬಾರಿ ಯಶ್ ಹೆಸರೇಳುವಾಗಲೂ `ರಾಕಿ-ರಾಕಿ’ ಎಂದು ಜೋರಾಗಿ ಕೂಗುತ್ತಿದ್ದ ವಿದ್ಯಾರ್ಥಿಗಳು, ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅಭಿಮಾನ ಮೆರೆದರು. ವೇದಿಕೆಗೆ ಯಶ್ ಆಗಮಿಸಿದಾಗಲಂತೂ ವಿದ್ಯಾರ್ಥಿ ಸಮೂಹ ಹುಚ್ಚೆದ್ದು ಕುಣಿದು, ಹರ್ಷೋದ್ಘಾರ ಮುಗಿಲು ಮುಟ್ಟುವಂತೆ ಮಾಡಿದರು. ಅವರನ್ನು ಮೌನವಾಗಿರಿಸಲು ಆಯೋಜಕರು ಹರಸಾಹಸ ಪಡುವಂತಾಯಿತು. ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲು ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ ರಲ್ಲದೆ, ನಂತರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರು ನಡೆಸಿಕೊಟ್ಟ ಸಂಗೀತ, ನೃತ್ಯ ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸಿದರು. ಎಲ್ಲಾ ಜಿಲ್ಲೆಗಳ ಪದವಿ ಕಾಲೇಜುಗಳಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ವಿದ್ಯಾರ್ಥಿ ಸಮೂಹವನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಣಗಾಡುವಂತಾಯಿತು. ಎಲ್ಲರೂ ಕೈಯ್ಯಲ್ಲಿ ರಾಷ್ಟ್ರ ಧ್ವಜ ಹಿಡಿದು ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದುದು ಮತ್ತೊಂದು ವಿಶೇಷ.