ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ಇಂದಿನಿಂದ ದ್ವಿತೀಯ  ಪಿಯುಸಿ ವಾರ್ಷಿಕ ಪರೀಕ್ಷೆ
ಮೈಸೂರು

ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

August 19, 2021

ಮೈಸೂರು, ಆ.18(ಆರ್‍ಕೆ)-ಸರ್ಕಾರ ಪ್ರಕಟಿಸಿರುವ ಫಲಿತಾಂಶ ತೃಪ್ತಿಕರವಾಗಿಲ್ಲ ವೆಂದು ತಿರಸ್ಕರಿಸಿರುವ ವಿದ್ಯಾರ್ಥಿಗಳಿಗಾಗಿ ನಾಳೆ (ಆ.19)ಯಿಂದ ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಮೈಸೂರಿನ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಜಿಲ್ಲೆಯ ಎಲ್ಲಾ 6 ತಾಲೂಕುಗಳಲ್ಲಿ ತಲಾ ಒಂದೊಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ವಿಷಯವಾರು ಒಟ್ಟು 949 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನವಾದ ನಾಳೆ (ಆ.19) ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬೇಸಿಕ್ ಮ್ಯಾಥಮ್ಯಾಟಿಕ್ಸ್ ವಿಷಯದ ಪರೀಕ್ಷೆ ನಡೆಯಲಿದ್ದು, ಕೇವಲ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

ಮಹಾರಾಣಿ ಕಾಲೇಜಿನಲ್ಲಿ ನಡೆಯುವ ಗಣಿತ ವಿಷಯದ ಪರೀಕ್ಷೆಗೆ 4 ವಿದ್ಯಾರ್ಥಿ ಗಳು ಹಾಜರಾಗಲಿದ್ದಾರೆ. ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಪರೀಕ್ಷೆಗಳು ನಡೆಯಲಿದ್ದು, ಸೆಪ್ಟೆಂಬರ್ 3ರಂದು ಅಂತ್ಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Translate »