ಅನಧಿಕೃತ ಯುಜಿಡಿ ಸಂಪರ್ಕಕ್ಕಾಗಿ ರಸ್ತೆ  ಅಗೆದ ಡೆವಲಪರ್‍ಗೆ ಪಾಲಿಕೆ ನೋಟೀಸ್
ಮೈಸೂರು

ಅನಧಿಕೃತ ಯುಜಿಡಿ ಸಂಪರ್ಕಕ್ಕಾಗಿ ರಸ್ತೆ ಅಗೆದ ಡೆವಲಪರ್‍ಗೆ ಪಾಲಿಕೆ ನೋಟೀಸ್

August 19, 2021

ಮೈಸೂರು, ಆ.18(ಎಸ್‍ಪಿಎನ್)-ಮೈಸೂರು ನಗರ ಪಾಲಿಕೆ ಅನುಮತಿ ಪಡೆ ಯದೇ ಖಾಸಗಿ ಬಡಾವಣೆಗೆ ಯುಜಿಡಿ ಸಂಪರ್ಕ ಕೊಡಲು ಅನಧಿಕೃತವಾಗಿ ರಸ್ತೆ ಅಗೆಯುತ್ತಿದ್ದ ಖಾಸಗಿ ಡೆವಲಪರ್‍ಗೆ ವಲಯ ಕಚೇರಿ 5ರ ಆಯುಕ್ತರು, ಬುಧ ವಾರ ನೋಟೀಸ್ ಜಾರಿ ಮಾಡಿದ್ದಾರೆ.
ಮಥುರಾ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ (ಕಣ್ವ ಕಾರ್ಖಾನೆ ಸಮೀಪ) ಈ ಸಂಸ್ಥೆಯು (ಎಲೈಟ್ ಪ್ರಾಡಕ್ಟ್ ಸಂಸ್ಥೆ) ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆ ಕಾಮಗಾರಿ ಪ್ರಗತಿಯಲ್ಲಿದೆ.

ಈ ಬಡಾವಣೆಯ ದಕ್ಷಿಣ ಭಾಗದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆ ಇದೆ(ಮಥುರಾ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ). ಈ ರಸ್ತೆಯಲ್ಲಿ ಎಲೈಟ್ ಪ್ರಾಡಕ್ಟ್ ಸಂಸ್ಥೆಯ ಸಿಬ್ಬಂದಿ ಬುಧುವಾರ ಜೆಸಿಬಿಯಲ್ಲಿ ಏಕಾಏಕಿ 50 ಮೀಟರ್ ನಷ್ಟು ರಸ್ತೆಯನ್ನು ಅಗೆಯುತ್ತಿದ್ಧಾಗ ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಅನಧಿಕೃತ ಕಾಮಗಾರಿಯಿಂದ ಈ ಮಾರ್ಗದ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಜಿ.ಎನ್. ನಾಗೇಂದ್ರ ನೀಡಿದ ದೂರಿನ ಮೇರೆಗೆ ಎಲೈಟ್ ಪ್ರಾಡಕ್ಟ್ ಸಂಸ್ಥೆಗೆ ವಲಯ ಕಚೇರಿ-5ರ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ.
ಕೆಎಂಸಿ ಕಾಯ್ದೆ ಪ್ರಕಾರ ಈ ನೋಟೀಸ್ ತಲುಪಿದ ಮೂರು ದಿನದೊಳಗೆ ಅಗತ್ಯ ದಾಖಲಾತಿಯೊಂದಿಗೆ ಕಚೇರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಸಂಸ್ಥೆಗೆ ನೀಡಿರುವ ನೋಟೀಸ್ ಉಲ್ಲೇಖಿಸಿದ್ದಾರೆ.

Translate »