ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡರಿಂದ  ಅತ್ಯಂತ ನಿಷ್ಠೆಯ ನ್ಯಾಯಪರ ವಾದ ಮಂಡನೆ
ಮೈಸೂರು

ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡರಿಂದ ಅತ್ಯಂತ ನಿಷ್ಠೆಯ ನ್ಯಾಯಪರ ವಾದ ಮಂಡನೆ

August 19, 2021

ಮೈಸೂರು,ಆ.18(ಪಿಎಂ)-ಹಿರಿಯ ವಕೀಲ ಎಸ್.ಜೆ.ಲಕ್ಷ್ಮೇಗೌಡ ಅವರು ಅತ್ಯಂತ ನಿಷ್ಠೆಯಿಂದ ನ್ಯಾಯಪರ ವಾದ ಮಂಡಿಸುತ್ತಿದ್ದರು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು.

ಮೈಸೂರಿನ ಖಾಸಗಿ ಹೋಟೆಲ್ ಆವರಣದಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ವಕೀಲ ಎಸ್.ಜೆ. ಲಕ್ಷ್ಮೇಗೌಡ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾವೆಲ್ಲರೂ ನೋಡಿದ ರೀತಿಯಲ್ಲಿ ವಕೀಲ ವೃತ್ತಿ ಕಷ್ಟಮಯವಿದೆ. ಇದರ ನಡುವೆಯೂ ಅತ್ಯಂತ ನಿಷ್ಠೆ ಯಿಂದ ನ್ಯಾಯಪರ ವಾದ ಮಂಡಿಸುತ್ತಿದ್ದ ಲಕ್ಷ್ಮೇ ಗೌಡರು ಆದರ್ಶ ವ್ಯಕ್ತಿ. ಅವರ ಬಗ್ಗೆ ಎಷ್ಟು ಮಾತ ನಾಡಿದರೂ ಸಾಲದು. ಅವರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ. ಹಾಗೆಯೇ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಯನ್ನೂ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಲಾಗೈಡ್ ಸಂಪಾದಕ ಹೆಚ್.ಎನ್.ವೆಂಕಟೇಶ್ ಅವರ ನೇತೃತ್ವದಲ್ಲಿ ಇಂತಹ ಸ್ಮರಣೀಯ ಕಾರ್ಯ ಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ನ್ಯಾಯಾ ಲಯದಲ್ಲಿ ಸೇವೆ ಸಲ್ಲಿಸುವ ಯಾರೇ ಆಗಲಿ ಅವರ ಬಗ್ಗೆ ಕಳಕಳಿ, ಪ್ರೀತಿ ವಿಶ್ವಾಸದಿಂದಿರುವುದು ತಮ್ಮ ಆದ್ಯ ಕರ್ತವ್ಯ ಎಂಬ ಉದಾತ್ತ ಭಾವನೆಯನ್ನು ವೆಂಕ ಟೇಶ್ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಕ್ಷ್ಮೇಗೌಡರನ್ನು ನಾವೆಲ್ಲರೂ ಕೊಂಡಾಡು ತ್ತಿದ್ದೇವೆ ಎಂದರೆ ಅವರ ತಂದೆ-ತಾಯಿ ಅವರಿಗೆ ಕೊಟ್ಟ ಸಂಸ್ಕಾರವಾಗಿದೆ. ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಬೆಳೆಸುವುದೇ ನಿಜವಾದ ಆಸ್ತಿ. ಇದರ ಹೊರತಾಗಿ ಬೇರೆ ಯಾವುದೇ ಆಸ್ತಿ-ಅಂತಸ್ತು ಶಾಶ್ವತವಲ್ಲ. ಸಂಸ್ಕಾರ ಕೊಟ್ಟು ಸಜ್ಜನರನ್ನಾಗಿ ನಮ್ಮ ಮಕ್ಕಳನ್ನು ಮಾಡಬೇಕಿದೆ ಎಂದರು.

ಕೋವಿಡ್ ತಂದಿರುವ ದುಸ್ಥಿತಿ ನೋಡಿದರೆ ನಾವು ಏಕಾಗಿ ದುರಾಸೆ ಬೀಳಬೇಕು ಎನ್ನಿಸುತ್ತದೆ. ಯಾವ ಪುರುಷಾರ್ಥಕ್ಕೆ ಭಾರೀ ಆಸ್ತಿ ಸಂಪಾದನೆ ಮಾಡಬೇಕು. ಆಕಸ್ಮಿಕವಾಗಿ ಹುಟ್ಟಿರುವ ನಾವು ಸಾಯುವುದು ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ಇಡೀ ಮಾನವ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಎಸ್.ಜೆ.ಲಕ್ಷ್ಮೇಗೌಡ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ಆರ್.ಚಂದ್ರಮೌಳಿ, ಹಿರಿಯ ವಕೀಲರಾದ ಎಂ.ಡಿ.ಹರೀಶ್‍ಕುಮಾರ್ ಹೆಗ್ಡೆ, ಲಾಗೈಡ್ ಪತ್ರಿಕೆ ಸಂಪಾದಕರೂ ಆದ ಹಿರಿಯ ವಕೀಲ ಹೆಚ್.ಎನ್.ವೆಂಕಟೇಶ್, ಹೆಚ್.ವಿ.ಶ್ರೀನಾಥ್, ಜಿ.ವಿ. ರಾಮಮೂರ್ತಿ, ಎಸ್.ಲೋಕೇಶ್ ಸೇರಿದಂತೆ ಲಕ್ಷ್ಮೇ ಗೌಡರ ಪತ್ನಿ ಮತ್ತು ಕುಟುಂಬದವರು ಹಾಜರಿದ್ದರು.

Translate »