ಮೈಸೂರು, ಆ.22(ಆರ್‍ಕೆಬಿ)-ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪೌರಕಾರ್ಮಿಕರ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಜಿಲ್ಲಾಡಳಿತದ ಸಹಯೋಗದಲ್ಲಿ ಮೈಸೂರಿನ ಮುಕ್ತ ಗಂಗೋತ್ರಿ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇನ್ನೂ 5,000 ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಿ ರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಈ ಅಮಾನ ವೀಯ ಪದ್ಧತಿಯನ್ನು ಕೊನೆಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದು ಇನ್ನೂ ಅಸ್ತಿತ್ವದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪೌರಕಾರ್ಮಿಕರ ಬೇಡಿಕೆಗಳಾದ ಉಚಿತ ಶಿಕ್ಷಣ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿಯನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡುವುದು, ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ನ್ಯಾಯಯುತವಾಗಿದೆ. ಇದು ಮೊದಲ ಬಿಜೆಪಿ ಸರ್ಕಾರದಲ್ಲಿ (2008 ರಿಂದ 2013) ಬಿ.ಎಸ್.ಯಡಿಯೂರಪ್ಪ ಅವರು ಪೌರಕಾರ್ಮಿಕರ ಉನ್ನತಿ ಮತ್ತು ಸಬಲೀಕರಣಕ್ಕಾಗಿ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗವನ್ನು ಸ್ಥಾಪಿಸಿದ್ದರು ಎಂದರು. ಬಿಜೆಪಿ ಸರ್ಕಾರ ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳು ಮತ್ತು ಸವಲತ್ತು ಗಳನ್ನು ವಿವರಿಸಿದ ಅವರು, ಬೊಮ್ಮಾಯಿ ಸರ್ಕಾರ ಇತ್ತೀಚೆಗೆ ಸಂಕಷ್ಟ ಭತ್ಯೆಯಾಗಿ ಪೌರಕಾರ್ಮಿಕರಿಗೆ 2,000 ರೂ. ನೀಡು ತ್ತಿದೆ. ಈ ಹಿಂದೆ ಯಾವುದೇ ಸರ್ಕಾರ ಇದನ್ನು ಮಾಡಿಲ್ಲ. ಪೌರಕಾರ್ಮಿಕರ ಕಲ್ಯಾಣಕ್ಕೆ ಬೊಮ್ಮಾಯಿ ಸರ್ಕಾರ ಬದ್ಧವಾ ಗಿದೆ ಎಂದು ಹೇಳಿದರು. 90 ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿಷೇಧವಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಅದು ಇನ್ನೂ ಜೀವಂತವಾಗಿದ್ದು, ಸಮಾಜವನ್ನು ಕಾಡುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಮಂದಿ ಪೌರಕಾರ್ಮಿಕರಿದ್ದಾರೆ. ಅದರಲ್ಲೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳು ಎಷ್ಟಿದ್ದಾರೆ ಎಂಬ ಬಗ್ಗೆ ಗ್ರಾಮ ಪಂಚಾಯತಿ ಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆ ಕರೆದು ಚರ್ಚಿಸಿ, ವರದಿ ನೀಡುವಂತೆ ಆಯೋಗದ ಅಧ್ಯಕ್ಷರಿಗೆ ಸಲಹೆ ನೀಡಿದರು.
ಪೌರಕಾರ್ಮಿಕರಿಂದ ಮಲ ಹೊರುವುದಾಗಲೀ, ಮ್ಯಾನ್ ಹೋಲ್‍ಗಳಿಗೆ ಇಳಿಸಿ ಸ್ವಚ್ಛತೆಗೆ ಹಚ್ಚುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಆಯೋಗದ ಕಾರ್ಯವೈಖರಿ ಮತ್ತು ಪೌರಕಾರ್ಮಿಕ ಸಮಸ್ಯೆಗಳ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು. ರಾಜ್ಯದಲ್ಲಿ 53 ಸಾವಿರ ಹೊರಗುತ್ತಿಗೆ ಅಥವಾ ಗುತ್ತಿಗೆ ಪೌರಕಾರ್ಮಿಕರ ಪೈಕಿ 12 ಸಾವಿರ ಪೌರ ಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಿದೆ. ಅವರನ್ನು ಖಾಯಂ ಗೊಳಿಸುವುದು ಸರ್ಕಾರದ ಗಂಭೀರ
ಪರಿಗಣನೆಯಲ್ಲಿದ್ದು, ಶೀಘ್ರದಲ್ಲಿಯೇ ಈ ಕುರಿತು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು. ಪ್ರತಿಭಾ ಪುರಸ್ಕಾರ ನೀಡಿದ ಅವರು, ಇಂತಹ ಕಾರ್ಯಕ್ರಮಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಮೊದಲನೆಯದು ಇಂದು ಮೈಸೂರಿನಲ್ಲಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ (2021-22)ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 81 ಪೌರಕಾರ್ಮಿಕ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಲ್ಲದೆ, ಅಗತ್ಯವಿರುವ ಕೆಲವು ಅರ್ಹ ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ಸಚಿವ ಗೋವಿಂದ ಕಾರಜೋಳ ವಿತರಿಸಿದರು.
ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಮೇಯರ್ ಸುನಂದಾ ಪಾಲನೇತ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ರಾಜ್ಯ ಸಫಾಯಿ ಕರ್ಮಚಾರಿಗಳ ನಿಗಮದ ಅಧ್ಯಕ್ಷ ವೆಂಕಟೇಶ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಇನ್ನಿತರರು ಉಪಸ್ಥಿತರಿದ್ದರು.