ಚಿನ್ನಾಭರಣಕ್ಕೆ ಮಹಿಳೆ ಕೊಲೆ; ಆದರೆ  ಹಂತಕರಿಗೆ ಸಿಕ್ಕಿದ್ದು, ಕೇವಲ 10 ರೂ.
ಮಂಡ್ಯ

ಚಿನ್ನಾಭರಣಕ್ಕೆ ಮಹಿಳೆ ಕೊಲೆ; ಆದರೆ ಹಂತಕರಿಗೆ ಸಿಕ್ಕಿದ್ದು, ಕೇವಲ 10 ರೂ.

August 23, 2022

ಮಂಡ್ಯ, ಆ.22- ವರ್ಷದ ಹಿಂದೆ ನಡೆದಿದ್ದ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಹಲಗೂರು ಠಾಣೆಯ ಪೊಲೀಸರು ಬೆಂಗಳೂರಿನ ಮಹಿಳೆ ಹಾಗೂ ಆಕೆಯ ಪ್ರಿಯತಮನನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ 3ನೇ ಹಂತದ ನಿವಾಸಿ ಜಿ.ನಾರಾಯಣ ಅಲಿಯಾಸ್ ನಾಣಿ ಮತ್ತು ಆತನ ಪ್ರಿಯತಮೆ ಮೂಲತಃ ಚನ್ನಪಟ್ಟಣ ತಾಲೂಕು ಹೊನ್ನಿಗನಹಳ್ಳಿ ಗ್ರಾಮದವಳಾಗಿದ್ದು, ಬೆಂಗಳೂರಿನ ಚಳ್ಳಘಟ್ಟದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ಬಂಧಿತ ರಾಗಿದ್ದು, ಇವರು ಚಂದ್ರಕಲಾ ಅಲಿಯಾಸ್ ಶೋಭಾ (42) ಎಂಬಾಕೆಯನ್ನು 2021ರ ಜುಲೈ 28ರಂದು ಆಟೋದಲ್ಲಿ ಮಳ ವಳ್ಳಿ ತಾಲೂಕು ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಯ್ಯನಕಟ್ಟೆ ಗುಡ್ಡದ ಬಳಿ ಹತ್ಯೆ ಮಾಡಿದ್ದರು.

ವಿವರ: ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಯ್ಯನಕಟ್ಟೆ ಗುಡ್ಡದ ಬಳಿ 2021ರ ಜುಲೈ 29ರಂದು ಬೆಳಗ್ಗೆ ಮಹಿಳೆಯ ಶವ ಪತ್ತೆಯಾಗಿತ್ತು. ಈಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿತ್ತು. ಹತ್ಯೆಗೀಡಾದ ಮಹಿಳೆ ಯಾರು? ಎಂಬು ದರ ಬಗ್ಗೆ ಯಾವುದೇ ರೀತಿಯ ಸುಳಿವು ದೊರೆತಿರಲಿಲ್ಲ. ಹೀಗಾಗಿ, ಅಪರಿಚಿತ ಮಹಿಳೆ ಕೊಲೆ ಪ್ರಕರಣವನ್ನು ಹಲಗೂರು ಠಾಣೆಯಲ್ಲಿ ದಾಖಲಿಸಲಾಗಿತ್ತು. ಹತ್ಯೆ ಗೀಡಾದ ಮಹಿಳೆ ಧರಿಸಿದ್ದ ಪ್ಯಾಂಟ್, ಟಾಪ್, ವೇಲ್ ಹಾಗೂ ಶೂ ಹೊರತು ಪಡಿಸಿದರೆ ಬೇರೇನೂ ದೊರೆಯದ ಕಾರಣ, ಈಕೆ ಯಾರು? ಎಂಬುದು ಪತ್ತೆಯಾಗಿರಲಿಲ್ಲ. ಆದರೆ, ಹಲಗೂರು ಠಾಣೆಯ ಪೊಲೀಸರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್ (ಪತ್ತೆಯಾಗದ ಪ್ರಕರಣ) ಸಲ್ಲಿಸದೆ ತನಿಖೆಯನ್ನು ಮುಂದುವರಿಸುತ್ತಲೇ ಇದ್ದರೂ, ರಾಜ್ಯ ಮಟ್ಟದಲ್ಲಿ ಪತ್ತೆಯಾಗದ ಹಳೇ ಪ್ರಕರಣಗಳ ಬಗ್ಗೆ ಆಗಿಂದಾಗೇ ಪೊಲೀಸರ ತಂಡವೊಂದು ಪರಿಶೀಲನೆ ನಡೆಸುತ್ತಲೇ ಇತ್ತು. ಹೀಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ 2021ರ ಜುಲೈನಲ್ಲಿ 42 ವರ್ಷ ವಯೋಮಾನದ ಚಂದ್ರಕಲಾ ಎಂಬಾಕೆ ನಾಪತ್ತೆಯಾಗಿರುವ ಪ್ರಕರಣದ ಬಗ್ಗೆ ರಾಜ್ಯದ ಎಲ್ಲಾ ಎಸ್‍ಪಿ ಕಚೇರಿ ಹಾಗೂ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು.

ಈ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಹಾಗೂ 2021ರಲ್ಲಿ ಹಲಗೂರು ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೀಡಾಗಿದ್ದ ಮಹಿಳೆಯ ಚಹರೆಗಳಲ್ಲಿ ಹೊಂದಾಣಿಕೆ ಇದ್ದ ಕಾರಣ ಮಂಡ್ಯ ಜಿಲ್ಲಾ ಎಸ್‍ಪಿ ಯತೀಶ್ ಅವರ ಸೂಚನೆ ಮೇರೆಗೆ ಮಳವಳ್ಳಿ ಉಪವಿಭಾಗದ ಡಿವೈಎಸ್‍ಪಿ ನವೀನ್‍ಕುಮಾರ್ ನೇತೃತ್ವದಲ್ಲಿ ಹಲಗೂರು ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀಧರ್ ಹಾಗೂ ತಾಂತ್ರಿಕ ತಂಡದವರು ಪತ್ತೆಯಾಗದಿದ್ದ ಮಹಿಳೆ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದರು.
ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಚಂದ್ರಕಲಾ ಅಲಿಯಾಸ್ ಶೋಭಾ ಮೊಬೈಲ್‍ನ ಕಾಲ್ ಡಿಟೇಲ್ಸ್ ಬಗ್ಗೆ ತಾಂತ್ರಿಕ ತಂಡ ಪರಿಶೀಲನೆ ನಡೆಸಿದಾಗ ಆಕೆಯ ಸಿಮ್ 2021ರ ಜುಲೈ 28ರಂದು ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಟವರ್‍ಗಳಲ್ಲಿ ಕಾರ್ಯನಿರ್ವಹಿಸಿರುವುದು ಗೊತ್ತಾಗಿದೆ. ಅದೇ ವೇಳೆ ಆಕೆಯ ಕಾಲ್ ಡಿಟೇಲ್ಸ್‍ನಲ್ಲಿದ್ದ ಲಕ್ಷ್ಮೀ ಎಂಬಾಕೆಯ ಸಿಮ್ ಕೂಡ ಅದೇ ಟವರ್‍ಗಳಲ್ಲಿ ಕಾರ್ಯನಿರ್ವಹಿಸಿರುವುದನ್ನು ಪತ್ತೆ ಮಾಡಿದ ಪೊಲೀಸರು, ಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಲಗೂರು ಠಾಣಾ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಲಕ್ಷ್ಮೀ ಮತ್ತು ಹತ್ಯೆಗೀಡಾದ ಚಂದ್ರಕಲಾ ಬೆಂಗಳೂರಿನ ಗೋಣಿಚೀಲ ಹೊಲಿಯುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಚಂದ್ರಕಲಾ ಚಿನ್ನದ ಒಡವೆಗಳನ್ನು ಧರಿಸಿ ಬರುತ್ತಿದ್ದಳು. ಆಕೆ ಒಡವೆಯನ್ನು ಪರ್ಸ್‍ನಲ್ಲಿ ಇಟ್ಟುಕೊಂಡು ಸುರಕ್ಷಿತ ಸ್ಥಳಕ್ಕೆ ಬಂದ ನಂತರ ಅದನ್ನು ಧರಿಸಿಕೊಳ್ಳುತ್ತಿದ್ದಳು ಎಂಬುದನ್ನು ಸಹದ್ಯೋಗಿ ಲಕ್ಷ್ಮೀ ಗಮನಿಸಿದ್ದಳು. ಈಕೆಯನ್ನು ಹತ್ಯೆ ಮಾಡಿದರೆ ಚಿನ್ನಾಭರಣ ದೊರೆಯುತ್ತದೆ ಎಂಬ ಉದ್ದೇಶದಿಂದ ಆಟೋ ಚಾಲಕನಾಗಿರುವ ಪ್ರಿಯತಮ ನಾಣಿಯೊಡಗೂಡಿ, ಯಾವುದೋ ಕಾರಣ ಹೇಳಿ ಚಂದ್ರಕಲಾಳನ್ನು ಆತ ಆಟೋದಲ್ಲೇ 2021ರ ಜುಲೈ 28ರಂದು ಹಲಗೂರು ಠಾಣೆ ವ್ಯಾಪ್ತಿಯ ಮುಳ್ಳಯ್ಯನಕಟ್ಟೆ ಗುಡ್ಡದ ಬಳಿ ಕರೆತಂದು ಆಕೆ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆಯೇ ಆಗಸ್ಟ್ 19ರಂದು ಇಬ್ಬರನ್ನೂ ಹಲಗೂರು ಪೊಲೀಸರು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಳವಳ್ಳಿ ಉಪವಿಭಾಗದ ಡಿವೈಎಸ್‍ಪಿ ನವೀನ್‍ಕುಮಾರ್ ನೇತೃತ್ವದಲ್ಲಿ ಹಲಗೂರು ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಬಿ.ಎಸ್.ಶ್ರೀಧರ್, ಸಬ್‍ಇನ್‍ಸ್ಪೆಕ್ಟರ್ ಡಿ.ರವಿಕುಮಾರ್, ಸಿಬ್ಬಂದಿಗಳಾದ ಅನ್ನಪೂರ್ಣ, ರಂಗಪ್ಪ ಸಾಲಾಪೂರ್, ರಿಯಾಜ್‍ಪಾಷಾ, ಸಿದ್ದರಾಜು, ರಫೀಕ್, ನದಾಫ್, ಚಿದಂಬರ್, ಮೊಹಮದ್ ಫಾರೂಖ್, ಮಲ್ಲಿಕಾರ್ಜುನ್ ಚುಳಕಿ, ಜಯಕುಮಾರ್, ಸಿದ್ದೇಗೌಡ ಭಾಗವಹಿಸಿದ್ದು, ಈ ತಂಡವನ್ನು ಜಿಲ್ಲಾ ಎಸ್‍ಪಿ ಯತೀಶ್ ಶ್ಲಾಘಿಸಿದ್ದಾರೆ.
ಹಂತಕರಿಗೆ ಸಿಕ್ಕಿದ್ದು ಬರೀ 10 ರೂಪಾಯಿ: ಚಂದ್ರಕಲಾಳನ್ನು ಹತ್ಯೆ ಮಾಡಿದರೆ ಚಿನ್ನಾಭರಣ ದೊರೆಯುತ್ತದೆ ಎಂಬ ಉದ್ದೇಶದಿಂದ ಆಕೆಯ ಸಹದ್ಯೋಗಿ ಲಕ್ಷ್ಮೀ ಮತ್ತು ನಾಣಿ ಚಂದ್ರಕಲಾಳನ್ನು ಹಲಗೂರಿನವರೆಗೂ ಆಟೋದಲ್ಲಿ ಕರೆತಂದು ಹತ್ಯೆ ಮಾಡಿದರು. ನಂತರ ಚಿನ್ನಾಭರಣ ಸಿಕ್ಕೇಬಿಟ್ಟಿತು ಎಂಬ ಸಂತಸದಿಂದ ಚಂದ್ರಕಲಾಳ ಪರ್ಸ್ ತೆಗೆದು ನೋಡಿದರೆ ಅಲ್ಲಿ ಇದ್ದದ್ದು, ಕೇವಲ 10 ರೂ. ಮಾತ್ರ. ಯಾವಾಗಲೂ ಪರ್ಸ್‍ನಲ್ಲೇ ಚಿನ್ನದ ಒಡವೆ ಇಟ್ಟುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದ ನಂತರ ಅದನ್ನು ಧರಿಸುತ್ತಿದ್ದ ಚಂದ್ರಕಲಾ ಅಂದು ಮಾತ್ರ ಒಡವೆಯನ್ನು ಮನೆಯಲ್ಲೇ ಇಟ್ಟು ಬಂದಿದ್ದಳು. ಚಿನ್ನಾಭರಣ ಸಿಗುತ್ತದೆ ಎಂಬ ಆಸೆಯಿಂದ ಲಕ್ಷ್ಮೀ ಮತ್ತು ನಾಣಿ ಆಟೋದಲ್ಲಿ ಚಂದ್ರಕಲಾಳನ್ನು ಕರೆತರುವಾಗ ಉಪಹಾರ, ಊಟ ಸಹ ಕೊಡಿಸಿದ್ದರು. ಆದರೆ, ಸಿಕ್ಕಿದ್ದು ಮಾತ್ರ ಕೇವಲ 10 ರೂ.

Translate »