ಮೈಸೂರು, ಅ.3(ಎಂಟಿವೈ)- ರಾಜ್ಯದಲ್ಲಿ ವರ್ಷಗಳ ಹಿಂದೆ ನಡೆಸಿದ ಜಾತಿವಾರು ಜನಗಣತಿ ಹಾಗೂ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮೈಸೂರಿನಲ್ಲಿ ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಜಾತಿವಾರು ಜನಗಣತಿ ವರದಿ ಜಾರಿಗೆ ಒತ್ತಾಯಿಸಿ ಪುರಭವನದ ಆವರಣದಲ್ಲಿ ರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪ ಡಿಸಿದರು. ಸಹಿ ಸಂಗ್ರಹ ಅಭಿಯಾನಕ್ಕೆ ಪ್ರೊ.ಕೆ.ಎಸ್.ಭಗವಾನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಹೆಚ್.ಕಾಂತರಾಜ ಆಯೋಗ ರಚನೆ ಮಾಡಿ ದೇಶದಲ್ಲೇ ಪ್ರಥಮ ಬಾರಿಗೆ ಜಾತಿವಾರು ಸಮಗ್ರ ಜನಗಣತಿ ನಡೆಸಿತ್ತು. 170 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾದ ವರದಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಈ ಆಯೋಗ ಸಿದ್ಧಪಡಿಸಿದ ಜಾತಿವಾರು ಜನಗಣತಿ ವರದಿಯು ನಿಖರ ಹಾಗೂ ವೈಜ್ಞಾನಿಕವಾದುದಾಗಿದೆ. ಈ ವರದಿ ಬಿಡುಗಡೆಗೊಳಿಸುವ ಮೂಲಕ ಮೀಸಲಾತಿ ನ್ಯಾಯಸಮ್ಮತವಾಗಿ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆ ಮಾಡದಿರುವುದು ದುಂದುವೆಚ್ಚ ಮಾಡಿದಂತಾಗಿದೆ. ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದ್ದರೆ ಈ ವರದಿಯನ್ನು ತಕ್ಷಣ ಬಿಡುಗಡೆ ಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಹೋರಾಟವು ಉಗ್ರ ರೂಪ ಪಡೆದುಕೊಳ್ಳ ಲಿದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮಾಜಿ ಮೇಯರ್ ಪುರುಷೋತ್ತಮ, ಲೋಕೇಶ್ ಮಾದಾಪುರ, ಕೆ.ರವಿ, ಪುಟ್ಟಸ್ವಾಮಿ, ಸೋಮಶೇಖರ್‍ಗೌಡ ಮತ್ತಿತರರು ಪಾಲ್ಗೊಂಡಿದ್ದರು.