ಐಎಎಸ್, ಐಪಿಎಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಬೃಹತ್ ಬಂಗ್ಲೋಗಳೇ ಏಕೆ ಬೇಕು?: ಸಾರಾ ಪ್ರಶ್ನೆ .
ಮೈಸೂರು

ಐಎಎಸ್, ಐಪಿಎಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಬೃಹತ್ ಬಂಗ್ಲೋಗಳೇ ಏಕೆ ಬೇಕು?: ಸಾರಾ ಪ್ರಶ್ನೆ .

September 7, 2021

ಮೈಸೂರು,ಸೆ.6(ಆರ್‍ಕೆಬಿ)-ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬೃಹತ್ ಬಂಗಲೆಗಳೇ ಏಕೆ ಬೇಕು? ಅವರಿಗೆ ಎಲ್‍ಐಜಿ, ಎಂಐಜಿ ಮನೆಗಳನ್ನು ಕಲ್ಪಿಸಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.

ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಗಳಿಗೆ ಎಲ್‍ಐಜಿ, ಎಂಐಜಿ ಮನೆ ಕೊಟ್ಟಿದ್ದರೆ ಅಲ್ಲಿ ಅವರು ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಿಸುತ್ತಿದ್ದರೇ? ಎಂದು ಪರೋಕ್ಷವಾಗಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಪ್ರಸ್ತಾಪಿಸಿ, ಪ್ರಶ್ನಿಸಿದರು. ಕೂಡಲೇ ಮುಖ್ಯಮಂತ್ರಿಗಳು ಇಂತಹ 5-6 ಎಕರೆ ಪ್ರದೇಶದಲ್ಲಿ ರುವ ಬೃಹತ್ ಬಂಗಲೆಗಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳ ವಾಸ್ತವ್ಯಕ್ಕೆ ಕಲ್ಪಿಸುವ ಬದಲಿಗೆ ಬಾಡಿಗೆ ಕಟ್ಟಡದಲ್ಲಿರುವ ಸಾರ್ವಜನಿಕ ಕಚೇರಿಗಳ ಉಪಯೋಗಕ್ಕೆ ಇಂತಹ ನಿವಾಸಗಳ ನೀಡಬೇಕು ಎಂದು ಆಗ್ರಹಿಸಿದರು.

ಮೈಸೂರು ಮತ್ತು ಸುತ್ತಮುತ್ತಲಿನ ನಿರ್ದಿಷ್ಟ ಭೂಮಿ ಯನ್ನು ಮರು ಸರ್ವೆ ಮಾಡುವಂತೆ ಸರ್ವೆ ಇತ್ಯರ್ಥ ಮತ್ತು ಭೂ ದಾಖಲೆಗಳ ಆಯುಕ್ತ ಮುನಿಷ್ ಮುದ್ಗಿಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ತಮ್ಮ ಒಡೆತನದಲ್ಲಿರುವ ಸಾ.ರಾ.ಕನ್ವೆನ್ಷನ್ ಹಾಲ್ ಮರು ಸರ್ವೆಗೆ ಬರುವುದಾದರೆ ನಾನೇ ಅಲ್ಲಿ ನಿಂತು ಪುಷ್ಪಗುಚ್ಛ ನೀಡಿ ಆದರದಿಂದ ಬರಮಾಡಿಕೊಳ್ಳುತ್ತೇನೆ. ಅವರೊಂದಿಗೆ ಶಾಸಕ ಎಚ್.ವಿಶ್ವನಾಥ್ ಅವರೂ ಬರಲಿ ಎಂದು ಹೇಳಿದರು.

ರಾಜಕಾರಣಿಗಳು ಮತ್ತು ನೇತಾರರು ಮಾತ್ರ ಬೃಹತ್ ಬಂಗ್ಲೋಗಳಲ್ಲಿ ನೆಲೆಸಲು ಅರ್ಹರು ಎಂದು ಸಮರ್ಥಿಸಿಕೊಂಡ ಅವರು, ಸಾರ್ವ ಜನಿಕರು ತಮ್ಮ ಕಾರ್ಯ ನಿಮಿತ್ತ ನಿರಂತರವಾಗಿ ಸಚಿವರು, ಶಾಸಕರು ಮತ್ತು ಸಂಸದರ ಮನೆಗಳಿಗೆ ಭೇಟಿ ನೀಡುತ್ತಾರೆ. ಅವರಿಗೆ ಬೃಹತ್ ವಸತಿ, ಸೌಲಭ್ಯ ಗಳು ಬೇಕಾಗುತ್ತವೆ. ಆದರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ವಿಶಾಲವಾದ ಜಾಗದಲ್ಲಿರುವ ಬಂಗ್ಲೋ ಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಏಕೆ ನೀಡ ಲಾಗಿದೆ ಎಂದು ಪ್ರಶ್ನಿಸಿದರು. ಸರ್ಕಾರವು ಅಂತಹ ಸುಸಜ್ಜಿತ ಬೃಹತ್ ಬಂಗ್ಲೋಗಳನ್ನು ಅವರಿಂದ ವಾಪಸ್ ಪಡೆದು ಅದನ್ನು ಸಾರ್ವಜನಿಕ ಉದ್ದೇಶ ಗಳಿಗೆ ಬಳಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಹೆಸರನ್ನು ಉಲ್ಲೇಖಿಸದೆ ಅವರನ್ನು ತರಾಟೆಗೆ ತೆಗೆದುಕೊಂಡ ಮಹೇಶ್, ಐಎಎಸ್ ಅಧಿಕಾರಿಗಳಿಗೆ ಭಾರೀ ಬಂಗ್ಲೋಗಳ ನೀಡಿದರೆ ಈಜು ಕೊಳ, ಜಿಮ್ ನಿರ್ಮಿಸುತ್ತಾರೆ. ಭಾರೀ ಮೊತ್ತದ ವಿದ್ಯುತ್ ಬಿಲ್‍ಗಳು ಬರುತ್ತವೆ. ಹಾಗಾಗಿ ಅವರಿಗೆ ಅಂತಹ ಭಾರೀ ಮನೆಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಭಾರೀ ಮೌಲ್ಯದ ಆಸ್ತಿ ಹೊಂದಿದ್ದಾರೆ. 500 ಕೋಟಿ, 1,000 ಕೋಟಿ. ಆಸ್ತಿ ಹೊಂದಿರುವುದು ಉಂಟು. ಎಲ್ಲಿಂದ ಅವರು ಇಂತಹ ಸಂಪತ್ತನ್ನು ಸಂಪಾದಿಸಿದ್ದಾರೆ ಎಂದು ಪ್ರಶ್ನಿಸಿದರು.

53,000 ಭೂ ದಾಖಲೆ ಪರೀಕ್ಷೆ ಬಾಕಿ ಉಳಿಸಿಕೊಂಡಿ ರುವುದೇಕೆ? ಮುನಿಶ್ ಮೌದ್ಗಿಲ್ ಮೇಲೆ ವಾಗ್ದಾಳಿ ನಡೆಸಿದ ಮಹೇಶ್, ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯನ್ನು ಅನುಸರಿಸಿ ರೈತರ ಭೂ ದಾಖಲೆಗಳನ್ನು ಸರಿಪಡಿ ಸುವ ಕೆಲಸವನ್ನು ಮುನಿಷ್ ಮುದ್ಗಿಲ್ ಅವರಿಗೆ ವಹಿಸ ಲಾಗಿದೆ. ಅವರು ಇದುವರೆಗೂ 53,000 ಭೂ ದಾಖಲೆ ಗಳ ಸಮೀಕ್ಷೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಸಮಿತಿ ರಚಿಸಲಿಲ್ಲವೇಕೆ? ಎಂದು ಪ್ರಶ್ನಿಸಿದರು. ನನ್ನ ಒಡೆತನದ ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಯಾವುದೇ ರೀತಿಯಲ್ಲೂ ಜಾಗ ಅತಿಕ್ರಮಣ ವಾಗಿಲ್ಲ ಎಂದು ಹೇಳಿದ ಅವರು, ಯಾವುದೇ ರೀತಿಯ ಸಮೀಕ್ಷೆ ಮತ್ತು ಮೌಲ್ಯಮಾಪನವನ್ನು ಎದುರಿಸಲು ನಾನು ಸಿದ್ಧ ಎಂದರು.
ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಿಲ್ಲದು. ನನ್ನ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ನಾನು ಯಾರಿಂ ದಲೂ ಯಾವುದೇ ಕಿಕ್‍ಬ್ಯಾಕ್ ಪಡೆದಿಲ್ಲ. ಹಾಗಾಗಿ ನನ್ನನ್ನು ಬ್ಲ್ಯಾಕ್‍ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಜಂಗಲ್ ಲಾಡ್ಜಸ್ ಮಾಜಿ ಅಧ್ಯಕ್ಷ ವಿವೇಕ್, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ಉಪ ಮೇಯರ್ ಶೈಲೇಂದ್ರ, ಪಾಲಿಕೆ ಸದಸ್ಯರಾದ ಅಶ್ವಿನಿ ಅನಂತು, ಶೋಭಾ ಇನ್ನಿತರರು ಉಪಸ್ಥಿತರಿದ್ದರು.

Translate »