ಮೈಸೂರಲ್ಲಿ ಅರಣ್ಯ ಇಲಾಖೆ ಹುತಾತ್ಮರಿಗೆ ಗೌರವ ನಮನ: ಹುತಾತ್ಮರ ಗುಣಗಾನ
ಮೈಸೂರು

ಮೈಸೂರಲ್ಲಿ ಅರಣ್ಯ ಇಲಾಖೆ ಹುತಾತ್ಮರಿಗೆ ಗೌರವ ನಮನ: ಹುತಾತ್ಮರ ಗುಣಗಾನ

September 12, 2018

ಮೈಸೂರು: ಮೈಸೂರಿನ ಅಶೋಕಪುರಂನ ಅರಣ್ಯ ಭವನದ ಆವರಣದ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಕರ್ತವ್ಯದ ವೇಳೆ ಹುತಾತ್ಮರಾದ ಅರಣ್ಯ ಸಿಬ್ಬಂದಿಯ ಆತ್ಮಕ್ಕೆ ಶಾಂತಿ ಕೋರಿ, ಗೌರವ ನಮನ ಸಲ್ಲಿಸಿದರು.

ಪ್ರತಿ ವರ್ಷ ಸೆ.11ರಂದು ಅರಣ್ಯ ಇಲಾಖೆ ಹುತಾತ್ಮರ ದಿನ ಆಚರಿಸಿ ರಾಜ್ಯದ ವಿವಿಧ ಅರಣ್ಯಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೇ ಹುತಾತ್ಮರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗೌರವ ಸಮರ್ಪಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ನಡೆದ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಅಗಲಿದ ಇಲಾಖಾ ಸಿಬ್ಬಂದಿಗೆ ಭಾವಪೂರ್ಣ ಶ್ರದ್ಧಾನಮನ ಸಲ್ಲಿಸಿದರು.

ಹುತಾತ್ಮರ ಸ್ಮಾರಕಕ್ಕೆ ಹುಲಿ ಮತ್ತು ಆನೆ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಮ್ ಸೇರಿದಂತೆ ಇನ್ನಿತರ ಗಣ್ಯರು ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದರು. ಬಳಿಕ ಜಗತ್‍ರಾಮ್ ಮಾತನಾಡಿ, ಅರಣ್ಯ ಇಲಾಖೆಯ ಸಿಬ್ಬಂದಿ ಸವಾಲನ್ನು ಹಿಮ್ಮೆಟ್ಟಿಸಿ ವನ್ಯಸಂಪತ್ತಿನ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು, 1966ರಿಂದ 2018ರವರೆಗೆ 44 ಮಂದಿ ವಿವಿಧ ಶ್ರೇಣಿಯ ಅರಣ್ಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವಾಗಲೇ ತಮ್ಮ ಪ್ರಾಣ ತ್ಯಾಗ ಮಾಡಿರುವ ಸಿಬ್ಬಂದಿಯನ್ನು ಇಲಾಖೆ ಗೌರವಿಸುವುದರೊಂದಿಗೆ ಸದಾ ಸ್ಮರಿಸುತ್ತದೆ.

ಕಳೆದ ವರ್ಷ ಕರ್ತವ್ಯ ನಿರ್ವಹಣೆ ವೇಳೆ ಆನೆ ದಾಳಿಯಿಂದ ಮೃತಪಟ್ಟ ಡಿಸಿಎಫ್ ಎಸ್.ಮಣಿಕಂದನ್ ಕರ್ತವ್ಯ ನಿಷ್ಠೆ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಇಲಾಖೆಯ ಪ್ರತಿಯೊಬ್ಬರಿಗೂ ದಿ.ಮಣಿಕಂದನ್ ಅವರ ಸಮರ್ಪಣಾ ಮನೋಭಾವ ಪ್ರೇರಕವಾಗಬೇಕು. ಕಾಡಿಗೆ ಬೆಂಕಿ ಬಿದ್ದಿದೆ ಎಂದು ತಿಳಿದ ಮಾರನೇ ದಿನವೇ ಸ್ಥಳಕ್ಕೆ ಧಾವಿಸಿ ಕರ್ತವ್ಯ ನಿರತರಾದರು. ಜೀವ ಭಯವಿಲ್ಲದೆ ಈ ರೀತಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರು. ಇಂತಹ ಮಹಾನ್ ವ್ಯಕ್ತಿತ್ವ ಹೊಂದಿದ್ದ ಮಣಿಕಂದನ್ ಅವರ ಸಮರ್ಪಣಾ ಭಾವ ಎಲ್ಲ ಸಿಬ್ಬಂದಿಯಲ್ಲೂ ಇರಬೇಕು ಎಂದರು.

ಹುತಾತ್ಮರ ಕುಟುಂಬಕ್ಕೆ ನೆರವಾಗಲು ಸಮಿತಿ: ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ನೌಕರರನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳನ್ನು ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಸಲಾಗುತ್ತಿದೆ. ಹುತಾತ್ಮರ ಕುಟುಂಬಕ್ಕೆ ನೆರವಾಗಲು ಅರಣ್ಯ ಹುತಾತ್ಮರ ದಿನಾಚರಣೆ ಸಮಿತಿ ಸ್ಥಾಪಿಸಲಾಗಿದೆ. ಈ ಸಮಿತಿಗೆ ನಾನಾ ವೃತ್ತಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಇದನ್ನು ಹುತಾತ್ಮರ ಅವಲಂಬಿತರು, ಅವರ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ ನೀಡಿಕೆಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಪರೇಡ್ ಕಮಾಂಡರ್ ಅವರಿಂದ ವಂದನೆ ಸಲ್ಲಿಸಲಾಯಿತು. ಬಳಿಕ ಕಳೆದ 51 ವರ್ಷದಿಂದ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ 44 ಸಿಬ್ಬಂದಿ ನಾಮವಾಚನ ನಡೆಯಿತು. ನಂತರ ಹುತಾತ್ಮರ ಗುರುತರವಾದ ಕೆಲಸಗಳು, ಪಡೆದ ಪ್ರಶಸ್ತಿ ಸೇರಿದಂತೆ ಇನ್ನಿತರ ಸಾಧನೆಗಳನ್ನು ಸ್ಮರಿಸಲಾಯಿತು. ಪೊಲೀಸ್ ವೃಂದದವರು ವಾಲಿ ಫೈರಿಂಗ್ ನಡೆಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಬಳಿಕ ಮೌನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ವೆಂಕಟೇಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಕೆ.ಟಿ. ಹನುಮಂತಪ್ಪ, ಸಿದ್ದರಾಮಪ್ಪ ಚಳ್ಕಾಪುರೆ, ಭಾನು ಪ್ರಕಾಶ್, ಶ್ರೀಧರ್, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹಾಗೂ ಇನ್ನಿತರರು ಪಾಲ್ಗೊಂಡು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

Translate »