ಆದಿವಾಸಿ ಯುವಕನ ಮೇಲೆ ಅರಣ್ಯ ಸಿಬ್ಬಂದಿ  ಗುಂಡು ಹಾರಿಸಿದ ಪ್ರಕರಣ; ತನಿಖೆಗೆ ಆಗ್ರಹ
ಮೈಸೂರು

ಆದಿವಾಸಿ ಯುವಕನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಪ್ರಕರಣ; ತನಿಖೆಗೆ ಆಗ್ರಹ

December 3, 2021

ಮೈಸೂರು,ಡಿ.2(ಪಿಎಂ)- ಪಿರಿಯಾ ಪಟ್ಟಣ ತಾಲೂಕು ಬೈಲುಕುಪ್ಪೆ ಬಳಿಯ ರಾಣಿಗೇಟ್ ಹಾಡಿಯ ಆದಿವಾಸಿ ಜೇನು ಕುರುಬ ಸಮುದಾಯದ ಯುವಕ ಬಸವನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಗಾಯಗೊಳಿಸಿದ್ದು, ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಬೇಕೆಂದು ಗ್ರೀನ್ ಇಂಡಿಯಾ ಟ್ರಸ್ಟ್‍ನ ಯೋಜನಾ ನಿರ್ದೇಶಕ ಡಾ. ಮಹೇಂದ್ರಕುಮಾರ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಅಲ್ಲಿನ ಸ್ಥಳೀಯ ಮುಖಂಡ ರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯುವಕ ಬಸವನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಅಲ್ಲದೇ, ಇಲಾಖೆ ಯವರೇ ಬಸವನ ವಿರುದ್ಧ ಗಂಧದ ಮರದ ತುಂಡುಗಳನ್ನು ಹೊತ್ತೊಯ್ಯುತ್ತಿದ್ದ ಕಾರಣ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಬಸವನ ಪತ್ನಿ ಪುಷ್ಪಾ ಸಹ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿ ದ್ದರೂ ಅದಕ್ಕೆ ಎಫ್‍ಐಆರ್ ದಾಖಲಿಸಿಲ್ಲ. ಯಾರದ್ದೇ ತಪ್ಪಿದ್ದರೂ ಶಿಕ್ಷೆಯಾಗಲಿ. ಜೊತೆಗೆ ಗುಂಡು ಹಾರಿಸಿರುವ ಹಿನ್ನೆಲೆಯಲ್ಲಿ ಪ್ರತಿ ದೂರು ಸಂಬಂಧವೂ ಎಫ್‍ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ದೂರಿದರು.

ಡಿ.1ರ ಬುಧವಾರ ಜೋಳ ಕೊಯ್ಲು ಮಾಡುತ್ತಿದ್ದ ಬಸವ, ಬಳಿಕ ಪಕ್ಕದ ಅಣ್ಣಯ್ಯ ಎಂಬುವವರ ಜಮೀನಿನಲ್ಲಿ ಬಹಿರ್ದೆಸೆಗೆ ಹೋಗಿದ್ದ. ಈ ವೇಳೆ ಅರಣ್ಯ ಇಲಾಖೆಯ ವಾಚ್‍ಮನ್ ಸುಬ್ರಮಣಿ, ಗಾರ್ಡ್‍ಗಳಾದ ಮಂಜುನಾಥ್, ಸಿದ್ದ ಮತ್ತು ಮಹೇಶ್ ಎಂಬುವರು ಬಸವನನ್ನು ಅಟ್ಟಾಡಿಸಿಕೊಂಡು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡು ಬಸವನ ಹಿಂಭಾಗ ಸೊಂಟಕ್ಕೆ ತಗುಲಿ ತೀವ್ರವಾಗಿ ಗಾಯವಾಗಿದೆ ಎಂದು ಮಹೇಂದ್ರಕುಮಾರ್ ವಿವರಿಸಿದರು.

ಗುಂಡು ಹೊಡೆದಿರುವ ಜಾಗದಲ್ಲಿ ರಕ್ತದ ಕಲೆಗಳು ಇವೆ. ಗುಂಡಿನ ಸದ್ದು ಕೇಳಿ ಆದಿ ವಾಸಿ ಮಹೇಶ್ ಓಡಿ ಬಂದಿದ್ದಾನೆ. ಆಗ ಬಂದೂಕು ಸುಬ್ರಮಣಿ ಕೈಯ್ಯಲ್ಲಿತ್ತು. ಈತ ವಾಚ್‍ಮನ್ ಆಗಿದ್ದು, ಖಾಯಂ ಕೂಡ ಆಗಿಲ್ಲ. ಇದೇ ಅರಣ್ಯ ಸಿಬ್ಬಂದಿ ಬಸವ ನನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿ ಸಿದ್ದು, ಇದಕ್ಕೂ ಮುನ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್‍ಐಆರ್ ಕೂಡ ಆಗಿದೆ. ಆದರೆ ಬಸ ವನ ಪತ್ನಿ ಪುಷ್ಪಾ ಅವರ ಪ್ರತಿ ದೂರು ಸ್ವೀಕರಿಸಿದರೂ ಎಫ್‍ಐಆರ್ ಮಾಡಿಲ್ಲ. ಕೊಲೆ ಮಾಡುವ ಸಲುವಾಗಿ ಗುಂಡು ಹಾರಿಸಲಾಗಿದೆ ಎಂದು ತಾವು ನೀಡಿರುವ ದೂರಿನಲ್ಲಿ ಪುಷ್ಪಾ ಆರೋಪಿಸಿದ್ದಾರೆ ಎಂದರು.

ಒಂದೂವರೆ ತಿಂಗಳ ಹಿಂದಿನ ದ್ವೇಷ?: ಒಂದೂವರೆ ತಿಂಗಳ ಹಿಂದೆ ಇದೇ ಅರಣ್ಯ ಸಿಬ್ಬಂದಿ, ಬಸವನ ಮನೆ ಮುಂದಿನ ಮರ ವನ್ನು ಯಾವ ಜಾತಿ ಮರವೆಂದು ಕೆತ್ತಿ ಪರಿಶೀಲಿಸುತ್ತಿದ್ದರು. ಇದನ್ನು ಬಸವನ ಮನೆಯವರು ಪ್ರಶ್ನಿಸಿದಾಗ, ಸಿಬ್ಬಂದಿ ವ್ಯಂಗ್ಯ ವಾಗಿ ಉತ್ತರಿಸಿದ್ದಾರೆ. ಈ ವೇಳೆ ಮನೆ ಯೊಳಗಿದ್ದ ಬಸವ ಹೊರ ಬಂದು ಮಹಿಳೆ ಯೊಂದಿಗೆ ಗಲಾಟೆ ಮಾಡದಂತೆ ಎಚ್ಚರಿಸಿ ದ್ದಾನೆ. ಆಗ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಗುಂಡು ಹೊಡೆಯಲು ಆ ಗಲಾಟೆ ಕಾರಣ ಇದ್ದಿರ ಬಹುದು. ಒಂದು ವೇಳೆ ಎಫ್‍ಐಆರ್ ದಾಖಲು ಮಾಡದಿದ್ದರೆ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು. ಸಿನಿಮಾ ನಾಯಕ ನಟ ಚೇತನ್, ಬಸವನ ಅಕ್ಕ ರಾಧಾ, ರಾಣಿ ಗೇಟ್ ಹಾಡಿ ನಿವಾಸಿ ಮಹೇಶ್, ಗ್ರೀನ್ ಇಂಡಿಯಾ ಟ್ರಸ್ಟ್‍ನ ಪಿರಿಯಾಪಟ್ಟಣ ತಾಲೂಕು ಸಂಚಾಲಕ ಜಯಪ್ಪ, ಮುಖಂಡ ರಂಗಸ್ವಾಮಿ ಗೋಷ್ಠಿಯಲ್ಲಿದ್ದರು.

Translate »