ದಸಂಸ ಬಣ ಒಗ್ಗೂಡಿಸಲು ಪುನರಾವಲೋಕನ ಸಮಿತಿ ರಚನೆ
ಮೈಸೂರು

ದಸಂಸ ಬಣ ಒಗ್ಗೂಡಿಸಲು ಪುನರಾವಲೋಕನ ಸಮಿತಿ ರಚನೆ

June 5, 2020

ಮೈಸೂರು, ಜೂ.4 (ಪಿಎಂ)- ಹಲವು ಬಣಗಳಾಗಿ ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿ (ದಸಂಸ) ಮತ್ತೆ ಒಟ್ಟುಗೂಡಿಸಿ ಬಲಿಷ್ಠ ಸಂಘಟನೆಯಾಗಿ ರೂಪಿಸಲು `ದಲಿತ ಸಂಘರ್ಷ ಸಮಿತಿ ಪುನರ್ ಅವಲೋಕನ ಸಮಿತಿ’ ಅಸ್ತಿತ್ವಕ್ಕೆ ತರಲಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಪುನರಾವಲೋಕನ ಸಮಿತಿ ರಾಜ್ಯ ಸಂಚಾ ಲಕ ಹರಿಹರ ಆನಂದಸ್ವಾಮಿ, ದಸಂಸ 1970ರ ದಶಕದಲ್ಲಿ ಶೋಷಿತ ಸಮು ದಾಯದ ಶಕ್ತಿಯಾಗಿ ಮೊಳಕೆಯೊಡೆ ಯಿತು. ಸಂಘಟನೆ ಆರಂಭದಲ್ಲಿ ದಲಿತರ ಪಾಲಿಗೆ ಪ್ರತ್ಯೇಕ ಶಕ್ತಿ ಕೇಂದ್ರವಾಗಿತ್ತು. ಅಲ್ಲದೆ, ಪರ್ಯಾಯ ಸರ್ಕಾರವೆಂಬಂತೆ ಛಾಪು ಮೂಡಿಸಿತ್ತು. ಹೀಗೆ 1985-90ರ ಅವಧಿ ಯಲ್ಲಂತೂ ಶೋಷಿತ ಸಮುದಾಯಗಳ ಬದುಕಿನ ಆಶಾಕಿರಣವಾಗಿದ್ದ ಸಂಘಟನೆ ಈಗ ಹಲವು ಬಣಗಳಾಗಿ ಇತಿಹಾಸ ಪುಟ ಸೇರಿದೆ ಎಂದು ವಿಷಾದಿಸಿದರು.

ಅಂದಿನ ದಸಂಸ ಕಾರ್ಯಕರ್ತರಲ್ಲಿ ಬದ್ಧತೆ, ಪ್ರಾಮಾಣಿಕತೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಎದೆಗಾರಿಕೆ ಇತ್ತು. ಸರ್ಕಾರಗಳು, ಭೂ ಮಾಲೀಕರು, ಮತಾಂಧರು, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಬೆಚ್ಚಿ ಬೀಳುತ್ತಿದ್ದರು. 1990ರಿಂದೀಚೆಗೆ ಸಂಘಟನೆ ಒಡೆದು ಹಲವು ಬಣಗಳಾಗಿ ಶಕ್ತಿ ಕಳೆದು ಕೊಂಡಿತು. ರಾಜಕೀಯ ಲಾಲಸೆ, ನಾಯಕತ್ವದ ಹಪಾಹಪಿ, ಮೇಲ್ಜಾತಿ ರಾಜಕಾರಣಿಗಳ ಓಲೈಕೆ ಸೇರಿದಂತೆ ಹತ್ತು ಹಲವು ಸಲ್ಲದ ಆಶಯಗಳಿಗೆ ಬಲಿಬಿದ್ದು ಸಂಘಟನೆ ಛಿದ್ರಗೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಿಷ್ಠಾವಂತ ಕಾರ್ಯಕರ್ತರು ಹತಾಶೆ ಯಿಂದ ತಟಸ್ಥರಾಗಿದ್ದಾರೆ. ದಿಕ್ಕು-ದೆಸೆ ಕಳೆದುಕೊಳ್ಳುತ್ತಿರುವ ಸಂಘಟನೆ ಸ್ಥಿತಿ ನಿಜವಾಗಿಯೂ ಸಾಮಾಜಿಕ ಬದ ಲಾವಣೆ ಬಯಸುವ ಎಲ್ಲರ ಆಂತರ್ಯ ವನ್ನು ಕಾಡುವಂತಿದೆ. ಹರಿದು ಹಂಚಿ ಹೋಗಿರುವ ಮೂಲ ಆಶಯಗಳ ಪುನ ರಾವಲೋಕನ ಆಗಬೇಕಿದೆ. ಈ ನಿಟ್ಟಿನಲ್ಲಿ ದಸಂಸದ ಮೂಲ ಆಶಯಗಳಿಗೆ ಒತ್ತು ನೀಡಲು ಹೊಸ ತಲೆ ಮಾರಿನ ಯುವ ಜನ ಒಳಗೊಂಡಂತೆ ಸಂಘಟನೆಯ ಹಿರಿಯ ತಲೆಮಾರಿನ ಚಿಂತಕರು, ಬರಹ ಗಾರರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನೂ ಒಟ್ಟುಗೂಡಿಸಲು ಉದ್ದೇ ಶಿಸಲಾಗಿದೆ ಎಂದು ತಿಳಿಸಿದರು.
ದಸಂಸ ಪುನರ್ ಅವಲೋಕನ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆರ್ಟಿಸ್ಟ್ ಎಸ್.ನಾಗರಾಜು, ಡಿ.ಎನ್. ಬಾಬು, ನಗರ ಸಂಚಾಲಕ ಪೈ.ಕೃಷ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »