ಒಂದೇ ಚಿತ್ರದಲ್ಲಿ ತಂದೆ-ಮಗ !  ತೆರೆಮೇಲೆ ರವಿಚಂದ್ರನ್-ವಿಕ್ರಂ ಜೋಡಿ
ಸಿನಿಮಾ

ಒಂದೇ ಚಿತ್ರದಲ್ಲಿ ತಂದೆ-ಮಗ ! ತೆರೆಮೇಲೆ ರವಿಚಂದ್ರನ್-ವಿಕ್ರಂ ಜೋಡಿ

June 5, 2020

ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಈ ವರ್ಷ ತಮ್ಮ ಜನ್ಮದಿನವನ್ನು ಮನೆಯ ಸದಸ್ಯರ ಜೊತೆ ಸರಳವಾಗಿ ಆಚರಿಸಿ ಕೊಂಡರು. ಇದೇ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ಧಾರೆ. ತಮ್ಮ ನಿರ್ದೇಶನದ ಚಿತ್ರಗಳನ್ನು ನೋಡಬೇ ಕೆನ್ನುವ ಅಭಿಮಾನಿಗಳ ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ಧಾರೆ.

ರವಿಚಂದ್ರನ್ ತೆರೆಮೇಲೆ ತಮ್ಮ ಪುತ್ರನ ಜೊತೆ ಕಾಣಿಸಿಕೊಳ್ಳುವುದರ ಜೊತೆಗೆ ಆ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳುವ ಸೂಚನೆ ನೀಡಿದ್ಧಾರೆ. ನಟ-ನಿರ್ಮಾಪಕ-ನಿರ್ದೇಶಕ-ಸಾಹಿತಿ-ಸಂಗೀತಗಾರ-ಸಂಕಲನಕಾರ ಹೀಗೆ ಚಿತ್ರನಿರ್ಮಾಣದ ಬಹುತೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ನಿಭಾಯಿಸಿರುವ ರವಿಚಂದ್ರನ್ ತಮ್ಮ ಪುತ್ರನಿಗಾಗಿ ಉತ್ತಮ ಕಥೆಯೊಂದನ್ನು ಹೆಣೆಯಲು ಲಾಕ್ಡೌನ್ ಟೈಮನ್ನು ಬಳಸಿಕೊಂಡಿದ್ಧಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆಗೆ ಎರಡನೇ ಮಗ ವಿಕ್ರಂ ರವಿಚಂದ್ರನ್ ನಾಯಕನಾಗಿ ತೆರೆಯ ಮೇಲೆ ಮಿಂಚಲಿದ್ಧಾರೆ. ಸದ್ಯ ಕಥಾಹಂದರ ಪೂರ್ಣವಾಗಿದ್ದು, ಚಿತ್ರದ ಕೆಲಸದಲ್ಲಿ ನಿರತರಾಗಿರುವ ರವಿಚಂದ್ರನ್ ಅವರು ಚಿತ್ರಕಥೆಯ ಬಗ್ಗೆ ಯಾವುದೇ ಸುಳಿವನ್ನು ನೀಡಿಲ್ಲ. ನಾನು ರವಿ ಬೋಪಣ್ಣ ಚಿತ್ರದ ಫೈನಲ್ ವರ್ಕ್‍ನಲ್ಲಿ ಬ್ಯುಸಿಯಾಗಿದ್ದೇನೆ ಅಲ್ಲದೆ ಈ ನಡುವೆ ಇನ್ನೂ ಮೂರು ಸ್ಕ್ರಿಪ್ಟ್‍ಗಳನ್ನು ಬರೆದು ಪೂರ್ಣಗೊಳಿಸಿದೆ. ಅದರಲ್ಲಿ ಒಂದು ಚಿತ್ರದಲ್ಲಿ ತಂದೆ ಮತ್ತು ಮಗ ನಾವಿಬ್ರೂ ಒಟ್ಟಿಗೆ ಸೇರಲಿದ್ದೇವೆ. ನಾನು ಹಾಗೂ ವಿಕ್ರಮ್ ಆ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ನಿರ್ದೇಶನದ ಜವಾಬ್ದಾರಿ ಕೂಡ ನನ್ನದೇ ಆಗಿರಲಿದೆ. ಅಲ್ಲದೆ ಇದು ನನ್ನ ಕಡೆಯಿಂದ ಇನ್ನೊಂದು ವಿಶಿಷ್ಟವಾದ ಪ್ರಯತ್ನವಾಗಿದೆ. ಕನ್ನಡ ಚಿತ್ರರಂಗ ದಲ್ಲಿಯೇ ಒಂದು ವಿನೂತನ ಚಿತ್ರಕಥೆ ಹೊಂದಿದ ಚಿತ್ರ ಇದಾಗಿದೆ. ಚಿತ್ರರಂಗ ಲಾಕ್‍ಡೌನ್‍ನಿಂದ ಹೊರಬಂದ ನಂತರ ನನ್ನ ಹೊಸ ಚಿತ್ರದ ಶೀರ್ಷಿಕೆ ಹಾಗೂ ಉಳಿದ ಕಲಾವಿದ, ತಂತ್ರಜ್ಞರ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ನಟ, ನಿರ್ದೇಶಕ ರವಿಚಂದ್ರನ್ ಅವರು ಹೇಳಿದ್ಧಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳು ಎಂದರೆ ಅಲ್ಲೇನೋ ಒಂದು ಹೊಸತನ ಇದ್ದೇ ಇರುತ್ತದೆ. ತಮ್ಮ ಪ್ರೇಮಲೋಕ ಚಿತ್ರದಿಂದ ಅವರು ಹಾಗೇ ಉಳಿಸಿಕೊಂಡು, ನಡೆಸಿಕೊಂಡೇ ಬಂದಿದ್ದಾರೆ. ಈಗ ತಮ್ಮ ಪುತ್ರನಿಗಾಗಿ ಒಳ್ಳೆಯ ಕಥೆಯನ್ನೇ ಹೆಣೆದಿರುತ್ತಾರೆ. ಅದರ ವಿಶೇಷತೆ ಗಳೇನು ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.

Translate »