ಅಭಿಷೇಕ್ ಬ್ಯಾಡ್‍ಮ್ಯಾನರ್ಸ್ ಲುಕ್ ರಿವೀಲ್ !
ಸಿನಿಮಾ

ಅಭಿಷೇಕ್ ಬ್ಯಾಡ್‍ಮ್ಯಾನರ್ಸ್ ಲುಕ್ ರಿವೀಲ್ !

June 5, 2020

ಈ ಹಿಂದೆ ಡಾಲಿ ಧನಂಜಯ್ ಅಭಿನಯದ ಪಾಪ್‍ಕಾರ್ನ್ ಮಂಕಿಟೈಗರ್ ಚಿತ್ರವನ್ನು ನಿರ್ಮಿಸಿದ್ದ ಸುಧೀರ್ ಕೆ.ಎಂ. ಹಾಗೂ ನಿರ್ದೇಶಕ ದುನಿಯಾ ಸೂರಿ ಕಾಂಬಿನೇಶನ್‍ನ ಮತ್ತೊಂದು ಚಿತ್ರ `ಬ್ಯಾಡ್ ಮ್ಯಾನರ್ಸ್.’ ರೆಬೆಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಚಿತ್ರದಲ್ಲಿ ಲವರ್‍ಬಾಯ್ ಆಗಿದ್ದ ಅಭಿ ಈ ಚಿತ್ರದಲ್ಲಿ ಮಾಸ್ ಹೀರೋ ಆಗಿ ಹೊರಹೊಮ್ಮಲಿದ್ದಾರೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಫಸ್ಟ್‍ಲುಕ್ ಪೋಸ್ಟರ್‍ನ್ನು ಅಂಬರೀಶ್ ಬರ್ತ್‍ಡೇ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಕಳೆದ 17 ವರ್ಷಗಳಿಂದ ಮ್ಯಾನೇಜರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ನಿರ್ಮಾಪಕ ಕೆ.ಎಂ. ಸುಧೀರ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಅವರಿಗೆ ಅಂಬರೀಶ್ ಜೊತೆ ಚಿತ್ರ ಮಾಡಬೇಕೆಂದು ತುಂಬಾ ದಿನಗಳಿಂದ ಆಸೆಯಿತ್ತಂತೆ. ಆದರೆ ಅದು ಸಾಧ್ಯವಾಗಿಲ್ಲ, ಈಗ ಅವರ ಪುತ್ರನ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಅಂಬರೀಶ್‍ರ ಚಿತ್ರ ಮಾಡಿದಷ್ಟೇ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ಸೂರಿ ಅವರ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿದ್ಧಾರೆ. ಸೂರಿ ನೋಡಿದರೆ, ಪಕ್ಕಾ ಮಾಸ್ ಮತ್ತು ರಾ ಸ್ಟೈಲ್ ಚಿತ್ರಗಳನ್ನೇ ಮಾಡಿಕೊಂಡು ಬಂದವರು. ಅಂಥವರ ಚಿತ್ರದಲ್ಲಿ ಅಭಿಷೇಕ್ ಹೇಗೆ ಕಾಣಿಸಲಿದ್ಧಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಾಗೆಯೇ ಅಭಿಷೇಕ್ ಅವರ ಸಿನಿ ಬದುಕಿನಲ್ಲಿ ಸೂರಿ ಜೊತೆ ಮಾಡುತ್ತಿರುವ ಈ ಚಿತ್ರ ಹೊಸ ಟರ್ನಿಂಗ್ ನೀಡಲಿದೆ ಎನ್ನಲಾಗುತ್ತಿದೆ.

ಸೂರಿ ಸಿನಿಮಾಗಳಿಗೆ ಅವರದ್ಧೇ ಆದ ಅಭಿಮಾನಿ ಬಳಗವಿದೆ. ಪ್ರೀತಿ-ಪ್ರೇಮ, ರೌಡಿಸಂ, ಆ್ಯಕ್ಷನ್ ಹೀಗೆ ಎಲ್ಲಾ ಥರದ ಕಥೆಗಳನ್ನೂ ವಿಭಿನ್ನ ಧಾಟಿಯಲ್ಲಿ ಹೇಳುವವರು ಸೂರಿ. ಅವರ ಜೊತೆ ಈಗಷ್ಟೇ ಚಿತ್ರರಂಗದಲ್ಲಿ ತನ್ನ ಪಯಣ ಆರಂಭಿಸಿರುವ ಅಭಿಷೇಕ್ ಕೆಲಸ ಮಾಡುತ್ತಿರುವುದು ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಚಿತ್ರದ ಪೋಸ್ಟರ್‍ನಲ್ಲಿ ಕೈಯಲ್ಲಿ ಗನ್ ಹಿಡಿದು ರಗಡ್‍ಲುಕ್ ನೀಡಿರುವ ಅಭಿಷೇಕ್, ಅಂತ ಚಿತ್ರದ ಅಂಬರೀಷ್‍ರನ್ನು ನೆನಪಿಸುತ್ತಾರೆ. ಆ ಫೋಸ್ ನೋಡುಗರ ಗಮನ ಸೆಳೆದಿದೆ. ಈ ಚಿತ್ರದ ಮೂಲಕ `ಯಂಗ್ ರೆಬೆಲ್‍ಸ್ಟಾರ್’ ಎಂಬ ಬಿರುದಿನೊಂದಿಗೆ ಅಭಿಷೇಕ್‍ರನ್ನು ಪರಿಚಯಿಸಲಾಗಿದೆ. ಈ ಚಿತ್ರಕ್ಕೆ ಚರಣ್‍ರಾಜ್ ಅವರ ಹಿನ್ನೆಲೆ ಸಂಗೀತವಿದ್ದು, ಪರಿಪೂರ್ಣ ಆಕ್ಷನ್ ಚಿತ್ರದ ಫೀಲ್ ನೀಡುತ್ತದೆ.

ಅಭಿಷೇಕ್ ಹಿಂದೆ ಸಂದೇಶ್ ನಾಗರಾಜ್ ನಿರ್ಮಾಣದ ‘ಅಮರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ನಾಗಶೇಖರ್ ಅವರ ನಿರ್ದೇಶನದಲ್ಲಿದ್ದ ಆ ಚಿತ್ರದ ಅನೇಕ ನಿರೀಕ್ಷೆಗಳನ್ನು ಮೂಡಿಸಿದ್ದರೂ ಸಹ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು, ವಿಭಿನ್ನ ಪ್ರೇಮ ಕಥೆಯೊಂದನ್ನು ನಾಗಶೇಖರ್ ಈ ಚಿತ್ರದ ಹೇಳಿದ್ದರು. ಈಗ ತಮ್ಮ ಎರಡನೆಯ ಚಿತ್ರದಲ್ಲಿ ಅಭಿಷೇಕ್ ತಮ್ಮ ಲುಕ್ ಬದಲಿಸಿಕೊಳ್ಳುತ್ತಿದ್ಧಾರೆ. ಇದು ಅವರ ಸಿನಿಮಾ ಬದುಕಿಗೆ ದೊಡ್ಡ ಮೆಟ್ಟಿಲಾಗಲಿದೆಯೇ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

Translate »