ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡ ರಚನೆ
ಕೊಡಗು

ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡ ರಚನೆ

April 20, 2020

ಮಡಿಕೇರಿ,ಏ.19-ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಪೊಲೀಸ್ ವತಿಯಿಂದ ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡವನ್ನು ರಚಿಸಲಾಗಿದೆ. ದೃಢಪಟ್ಟ ಅಥವಾ ಶಂಕಿತ ಕೋವಿಡ್-19 ಸಂಭವನೀಯ ಮರಣದ ಮೃತದೇಹವನ್ನು ನಿರ್ವಹಿಸುವ ಮತ್ತು ವಿಲೇವಾರಿ ಮಾಡುವ ಬಗ್ಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ತಂಡದ ಸದಸ್ಯರುಗಳಿಗಾಗಿ ಕಾರ್ಯಾಗಾರ ನಡೆಯಿತು.

ದೇಶದಲ್ಲಿ ಹರಡುತ್ತಿರುವ ಕೋವಿಡ್-19 ಕಾಯಿಲೆಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆ ಫಲಿಸದೆ ಯಾರಾದರೂ ಸೋಂಕಿತ ರೋಗಿಗಳು ಮೃತರಾದಲ್ಲಿ ಅಂತಹ ಪಾರ್ಥಿವ ಶರೀರವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಫೋರೆನ್ಸಿಕ್ ವಿಭಾಗದ ತಜ್ಞ ವೈದ್ಯಾಧಿಕಾರಿಗಳು ಕಾರ್ಯಾಚರಣೆ ಕುರಿತು ವಿವರಿಸಿದರು.

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪನ್ಯಾಸಕ ಡಾ.ಉಮೇಶ್ ಹಾಗೂ ಡಾ.ಶ್ಯಾಮಲಾ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ವಿಲೇವಾರಿ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಮೃತ ಶರೀರದ ವಿಲೇವಾರಿ ಕುರಿತಂತೆ ತರಬೇತಿ ನೀಡಿದರು. ಜಿಲ್ಲಾ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾ ಸಶಸ್ತ್ರ ದಳದ ಪೊಲೀಸ್ ನಿರೀಕ್ಷಕ ರಾಚಯ್ಯ, ಆರ್.ಎಸ್.ಐ ಭಾನುಪ್ರಕಾಶ್, ಪ್ರೋ. ಆರ್‍ಎಸ್‍ಐ ಮತ್ತು ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್‍ಪೋಸಲ್ ತಂಡದ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

Translate »