ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ
ಮೈಸೂರು

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

March 9, 2020

ನವದೆಹಲಿ,ಮಾ.8- ರಾಜ್ಯದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ (82) ಅವರು ಇಂದು ವಿಧಿವಶರಾಗಿದ್ದಾರೆ. ಕೇಂದ್ರದ ಮಾಜಿ ಕಾನೂನು ಸಚಿವರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರೂ ಆಗಿದ್ದ ಭಾರದ್ವಾಜ್, ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಹಂಸರಾಜ್ ಭಾರದ್ವಾಜ್ ಅವರು, 2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಅವರು ಹೆಚ್ಚುವರಿಯಾಗಿ 2012 ರಿಂದ 2013, ಮಾರ್ಚ್‍ವರೆಗೆ ಕೇರಳದ ರಾಜ್ಯಪಾಲ ರಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಹಂಸರಾಜ್ ಭಾರದ್ವಾಜ್ ಅವರ ಅವಧಿಯಲ್ಲಿ ನಾಲ್ವರು ಮುಖ್ಯ ಮಂತ್ರಿಗಳು ಪ್ರಮಾಣ ವಚನ
ಸ್ವೀಕರಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಎಫ್‍ಐಆರ್ ದಾಖಲಿಸಲು ಇವರು ಅನುಮತಿ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಸರ್ಕಾರವನ್ನು ಅಮಾನತಿನಲ್ಲಿಟ್ಟಿದ್ದು ಸಹ ಭಾರೀ ಸುದ್ದಿಯಾಗಿತ್ತು. ಹಂಸರಾಜ್ ಭಾರದ್ವಾಜ್ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠಾವಂತರಾಗಿದ್ದರು. 1982ರಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಕೇಂದ್ರದಲ್ಲಿ ಕಾನೂನು ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿದ್ದರು. ಇನ್ನು ನಾಳೆ ಬೆಳಗ್ಗೆ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ.

ಹಂಸರಾಜ್ ಭಾರದ್ವಾಜ್ ಅವರ ನಿಧನಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಹ ಸಂತಾಪ ಸೂಚಿಸಿದ್ದಾರೆ. ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವಧಿಯಿಂದಲೂ ನಾನು ಅವರನ್ನು ಬಲ್ಲೆ. ಅವರು ವಿನಯಶೀಲ, ಸ್ಪಷ್ಟ ಮತ್ತು ಜ್ಞಾನವುಳ್ಳ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

 

Translate »