ಮೈಸೂರು,ಜು.20(ಎಂಟಿವೈ)- ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರೊಂದಿಗೆ ಕೋವಿಡ್ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ನೇಮಕ ಹಾಗೂ ಅಗತ್ಯ ಉಪಕರಣ ಪೂರೈಸುವಂತೆ ಮಾಜಿ ಶಾಸಕ ವಾಸು ಒತ್ತಾಯಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನವಾಗಿ ನಿರ್ಮಿಸಿರುವ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಅಲ್ಲಿ ಟೆಸ್ಟ್ ಲ್ಯಾಬ್, ಸಿಟಿ ಸ್ಕಾೃನ್, ಎಕ್ಸ್‍ರೇ ಯಂತ್ರ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ಕಾಯ್ದುಕೊಳ್ಳಲಾಗಿಲ್ಲ ಎಂದು ಕಿಡಿಕಾರಿದರು.
ಕೋವಿಡ್ ಆಸ್ಪತ್ರೆಯಲ್ಲಿ ಬರೀ ಹಾಸಿಗೆ ವ್ಯವಸ್ಥೆ, ಊಟ ಕೊಟ್ಟರೆ ಸಾಕಾಗಲ್ಲ. ಅಗತ್ಯ ಸೌಲಭ್ಯ ಕಲ್ಪಿಸಬೇಕು. ಜಿಲ್ಲಾದ್ಯಂತ ವೈದ್ಯರು, ನರ್ಸ್, ಲ್ಯಾಬ್ ತಂತ್ರಜ್ಞರು, ಇತರ ಸಿಬ್ಬಂದಿ ಕೊರತೆಯಿದೆ. ಇದರಿಂದಾಗಿ ಸೋಂಕಿತ ರಿಗೆ ಸಕಾಲಕ್ಕೆ ಸಮರ್ಪಕ ಸೇವೆ ಸಿಗದೆ ಸಮಸ್ಯೆಯಾಗು ತ್ತಿದೆ. ಖಾಸಗಿ ಆಸ್ಪತ್ರೆಗಳ ವಿರುದ್ಧ ಗದಾಪ್ರಹಾರ ಮಾಡುವ ಮೊದಲು ಸರ್ಕಾರಿ ಆಸ್ಪತ್ರೆಗಳ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದರು.
ಕೊರೊನಾ ಸೇನಾನಿಗಳು ಶಸ್ತ್ರಾಸ್ತ್ರವಿಲ್ಲದೆ ಯುದ್ಧ ದಲ್ಲಿ ಹೋರಾಡುವಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣ ವಾಗಿದೆ. ಸೂಕ್ತ ರಕ್ಷಣಾ ಕವಚವಿಲ್ಲದೆ ಯಾವ ರೀತಿ ಕೋವಿಡ್ ರೋಗದ ವಿರುದ್ಧ ಹೋರಾಟ ಮಾಡಬೇಕು? ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಐವರು ವೈದ್ಯರು, ಕೆಆರ್ ಆಸ್ಪತ್ರೆಯ ಒಬ್ಬರು ವೈದ್ಯರಿಗೆ ಸೋಂಕು ತಗಲಿದೆ. ಇದು ಪಿಪಿಇ ಕಿಟ್‍ನ ಗುಣಮಟ್ಟದ ಕುರಿತು ಪ್ರಶ್ನೆ ಮೂಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕೋವಿಡ್‍ಯೇತರ ರೋಗಿಗಳಿಗೆ ಬಹಳ ತೊಂದರೆ ಯಾಗುತ್ತಿದೆ. ಕೆ.ಆರ್. ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಕೊರೊನಾ ನೆಗೆಟಿವ್ ವರದಿ ಕೇಳುತ್ತಿದ್ದು, ಬಹಳಷ್ಟು ಅನಾನು ಕೂಲವಾಗುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೈಸೂರಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗಿ ಪತ್ತೆಯಾಗುತ್ತಿದೆ. ಕೊರೊನಾದಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ವಾತಾ ವರಣದ ಏರುಪೇರಿನಿಂದಾಗಿ ಜ್ವರ, ಶೀತ ಆದರೂ ಕೊರೊನಾ ಇರಬಹುದೆಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಕೊರೊನಾ ಸೋಂಕು ತಗುಲಿದರೆ ಸಾವನ್ನಪ್ಪು ತ್ತೇವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದರಿಂದ ಸ್ವ್ಯಾಬ್ ಸ್ಯಾಂಪಲ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಪಕ್ಷಾತೀತವಾಗಿ ಜನಪ್ರತಿನಿಧಿಗಳು, ಮೂರು ಪಕ್ಷಗಳ ಮುಂಚೂಣಿ ನಾಯಕರು ಜನರಲ್ಲಿರುವ ಕೊರೊನಾ ಭಯ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತರೆ ವೈರಲ್ ಫೀವರ್‍ನಂತೆ ಕೊರೊನಾ ಕೂಡ ಒಂದು ಸಾಮಾನ್ಯ ವೈರಸ್‍ನಂತೆ ಎಂಬ ಅರಿವು ಜನರಲ್ಲಿ ಬಂದಾಗ ಮಾತ್ರ ಭಯ ಬಿಟ್ಟು ಗಂಟಲು ದ್ರವ ಪರೀಕ್ಷೆಗೆ ಸ್ವಯಂಪ್ರೇರಣೆಯಿಂದ ಬರುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅದು ಸರಿಯಾದ ಪೂರ್ವ ತಯಾರಿ, ಸೌಲಭ್ಯ ಕಲ್ಪಿಸುವಲ್ಲಿ ಎಡವಿದೆ. ಸರ್ಕಾರದಿಂದ ಮೈಸೂರು ಜಿಲ್ಲೆಗೆ ಒಂದೇ ಒಂದು ಸೌಲಭ್ಯಗಳು ಬಂದಿಲ್ಲ. ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದ್ದರೂ ಕೊರೊನಾದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿರು ವುದು ವಿಪರ್ಯಾಸ ಎಂದು ವಿಷಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಯುವ ಮುಖಂಡ ರವಿ ಇದ್ದರು.