ಮುಡಾ ನಿವೇಶನ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯಿಂದ ಬೆಂಗಳೂರು, ಬೆಳಗಾವಿಯಲ್ಲೂ ವಂಚನೆ
ಮೈಸೂರು

ಮುಡಾ ನಿವೇಶನ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯಿಂದ ಬೆಂಗಳೂರು, ಬೆಳಗಾವಿಯಲ್ಲೂ ವಂಚನೆ

January 5, 2021

ಮೈಸೂರು,ಜ.4-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿವೇಶನ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚಿಸಿರುವ ಆರೋಪದಡಿ ಬಂಧನ ಕ್ಕೊಳಗಾಗಿರುವ ಸಾಗರ್ ದೇಶಪಾಂಡೆ, ಬೆಂಗಳೂರು ಹಾಗೂ ಬೆಳಗಾವಿಯಲ್ಲೂ ಈ ರೀತಿಯ ಕೃತ್ಯ ನಡೆಸಿದ್ದಾನೆಂದು ತಿಳಿದು ಬಂದಿದೆ.

ಮುಡಾದ ನಕಲಿ ಲೆಟರ್‍ಹೆಡ್ ಬಳಸಿ ನಿವೇ ಶನ ಕೊಡಿಸುವುದಾಗಿ ನಂಬಿಸಿ, ಶಿಕ್ಷಕರು, ವಕೀ ಲರು, ವೈದ್ಯರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಯಿಂದ 2 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೆಸ್ಟೋರೆಂಟ್ ಮಾಲೀಕ ಸಾಗರ್ ದೇಶಪಾಂಡೆ (31)ಯನ್ನು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು, ಕೆಲದಿನಗಳ ಹಿಂದೆ ಶಿರಡಿಯಲ್ಲಿ ಬಂಧಿಸಿದ್ದರು.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಸಿಪಿ ಪ್ರಕಾಶ್‍ಗೌಡರು, ಮುಡಾದ ನಕಲಿ ದಾಖಲೆ ಸೃಷ್ಟಿಸಿಕೊಂಡು ಆ ಮೂಲಕ ನಿವೇಶನ ಕೊಡಿಸುವುದಾಗಿ ನಂಬಿಸಿ, ವಂಚಿಸಿರುವ ಪ್ರಕರಣ ದಡಿ ಸಾಗರ್ ದೇಶಪಾಂಡೆಯನ್ನು ಬಂಧಿಸಿ, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ. ಪರಿಚಯಸ್ಥರು, ಸ್ನೇಹಿತರ ಮೂಲಕ ಬೇರೆಯವರನ್ನು ಸಂಪರ್ಕಿಸಿ, ನಿವೇಶನ ಕೊಡಿಸುವುದಾಗಿ ಹೇಳುತ್ತಿದ್ದ. ನಕಲಿ ದಾಖಲೆಗಳನ್ನು ತೋರಿಸಿ, ನಂಬಿಕೆ ಹುಟ್ಟಿಸಿ, ಹಣ ಪಡೆದಿದ್ದ ಎಂಬ ಆರೋಪವಿದೆ. ಕೆಲವರು ದಾಖಲೆಗಳ ಬಗ್ಗೆ ಅನುಮಾನಗೊಂಡು ಮುಡಾದಲ್ಲಿ ವಿಚಾರಿಸಿದಾಗ ವಂಚಿಸಿರುವುದು ಗೊತ್ತಾಗಿದೆ. ಬಳಿಕ ಅವರು ವಕೀಲರ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಧಿತ ಆರೋಪಿ ಮೂಲತಃ ಬೆಳಗಾವಿಯವನಾಗಿದ್ದು, ಬೆಂಗಳೂರು ಮತ್ತು ಬೆಳಗಾವಿಯಲ್ಲೂ ಕೆಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಕೆ.ಆರ್.ನಗರದ ಮಧುವನಹಳ್ಳಿ ಬ್ಲಾಕ್ ನಿವಾಸಿಗಳಾದ ಜಿ.ಕವಿತಾ ಮತ್ತು ಮದೀನಾ ಎಂಬುವರು ನೀಡಿದ ದೂರಿನ ಮೇರೆಗೆ ಸರಸ್ವತಿ ಪುರಂ ಠಾಣೆಯಲ್ಲಿ ಕಳೆದ ಡಿ.11ರಂದು ಸಾಗರ್ ದೇಶಪಾಂಡೆ ಮತ್ತು ಬಿ.ಎಸ್.ಮೈನಾ ವಿರುದ್ಧ ಐಪಿಸಿ ಸೆಕ್ಷನ್ 406, 420, 465, 468, 471 ರೆಡ್‍ವಿತ್ 34 ರೀತ್ಯಾ ಪ್ರಕರಣ ದಾಖಲಾಗಿದೆ. ಪತ್ರವನ್ನು ಗಮನಿಸಿ, ಅದು ಮುಡಾದ ಅಧಿಕೃತ ಲೆಟರ್‍ಹೆಡ್ ಅಲ್ಲ. ಅಲ್ಲದೇ ಮೂರನೇ ವ್ಯಕ್ತಿಯಿಂದ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ, ದೂರು ನೀಡುವಂತೆ ಹೇಳಿದ್ದಾಗಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾಗರ್ ದೇಶಪಾಂಡೆ ತನ್ನ ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಮೈನಾ ಅವರನ್ನು ನಿವೇಶನ ಕೊಡಿಸುವ ವ್ಯವಹಾರದ ಪಾಲುದಾರೆ ಎಂದು ಪರಿಚಯಿಸುತ್ತಿದ್ದ. ಆದರೆ ವಂಚನೆಯಲ್ಲಿ ಮೈನಾ ಅವರ ಪಾತ್ರ ಈವರೆಗಿನ ವಿಚಾರಣೆಯಲ್ಲಿ ಕಂಡುಬಾರದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

Translate »