ಮೈಸೂರು-ಬೆಂಗಳೂರು ಎರಡು ಪ್ಯಾಸೆಂಜರ್ ರೈಲು ಸಂಚಾರ ಆರಂಭ
ಮೈಸೂರು

ಮೈಸೂರು-ಬೆಂಗಳೂರು ಎರಡು ಪ್ಯಾಸೆಂಜರ್ ರೈಲು ಸಂಚಾರ ಆರಂಭ

January 5, 2021

ಮೈಸೂರು, ಜ.4(ಎಸ್‍ಬಿಡಿ)- ಮೈಸೂರು-ಬೆಂಗಳೂರು ನಡುವೆ ಸೋಮವಾರ ದಿಂದ ಎರಡು ಸಾಮಾನ್ಯ ರೈಲುಗಳು ಸಂಚಾರ ಆರಂಭಿಸಿವೆ. ಮೈಸೂರಿನಿಂದ ಬೆಳಗ್ಗೆ 6.10 ಹಾಗೂ ಮಧ್ಯಾಹ್ನ 1.45ಕ್ಕೆ ಮೆಮು ಪ್ಯಾಸೆಂಜರ್ ರೈಲುಗಳು ಸಂಚರಿ ಸಿದ್ದು, ಮೊದಲ ದಿನವೇ 500ಕ್ಕೂ ಹೆಚ್ಚು ಜನ ಬೆಂಗಳೂರು ಕಡೆಗೆ ಪ್ರಯಾಣಿಸಿದ್ದಾರೆ. ಅಲ್ಲದೆ ಮೈಸೂರು-ಚೆನ್ನೈ ನಡುವಿನ ಶತಾಬ್ಧಿ ಎಕ್ಸ್‍ಪ್ರೆಸ್ ರೈಲು ಸಂಚಾರವೂ ಇಂದಿನಿಂದ ಆರಂಭವಾಗಿದೆ. ಬುಧವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಮಧ್ಯಾಹ್ನ 2.15ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು ರಾತ್ರಿ 10ಕ್ಕೆ ಚೆನ್ನೈ ತಲುಪಲಿದೆ. ಬೆಳಗ್ಗೆ 6ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 1ಕ್ಕೆ ಮೈಸೂರಿಗೆ ಆಗಮಿಸಲಿದೆ. ಮೈಸೂರು-ಚಾಮರಾಜನಗರ ಮಾರ್ಗದಲ್ಲಿ ಒಂದು ಪ್ಯಾಸೆಂಜರ್ ಹಾಗೂ ತಿರುಪತಿ ಎಕ್ಸ್‍ಪ್ರೆಸ್ ರೈಲುಗಳ ಸಂಚಾರ ಈಗಾಗಲೇ ಆರಂಭವಾಗಿದೆ.

ಕೌಂಟರ್‍ನಲ್ಲಿ ಟಿಕೆಟ್: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ 2 ಮೆಮು ರೈಲುಗಳು, ಬೆಳಗ್ಗೆ 11.30ಕ್ಕೆ ಹೊರಡುವ ಟಿಪ್ಪು ಎಕ್ಸ್‍ಪ್ರೆಸ್ ಹಾಗೂ ಚಾಮರಾಜನಗರಕ್ಕೆ ಸಂಚರಿಸುವ ಪ್ಯಾಸೆಂಜರ್ ರೈಲುಗಳಿಗೆ ನಿಲ್ದಾಣದ ಕೌಂಟರ್‍ನಲ್ಲೇ ಟಿಕೆಟ್ ಪಡೆದು ಪ್ರಯಾಣಿಸಬಹುದು. ಈ 4 ರೈಲುಗಳ ಹೊರತುಪಡಿಸಿ ಉಳಿದೆಲ್ಲಾ ರೈಲುಗಳ ಪ್ರಯಾಣಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯ. ಮೈಸೂರಿನಿಂದ ಬೆಂಗಳೂರು ಹಾಗೂ ಚಾಮರಾಜ ನಗರಕ್ಕೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲುಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಿಯಾಶೆಟ್ಟಿ ಮನವಿ ಮಾಡಿದ್ದಾರೆ.

21 ರೈಲುಗಳು: ಕೊರೊನಾ ಪರಿಣಾಮ ಸಂಪೂರ್ಣ ಸ್ಥಗಿತವಾಗಿದ್ದ ರೈಲು ಸಂಚಾರ ಹಂತ ಹಂತವಾಗಿ ಪುನಾರಂಭಗೊಂಡಿದ್ದು, ಸದ್ಯ ಮೈಸೂರಿನಿಂದ ತಮಿಳುನಾಡು, ಆಂಧ್ರ, ಕೇರಳ, ರಾಜಸ್ತಾನ್ ಸೇರಿದಂತೆ ವಿವಿಧ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಒಟ್ಟು 21 ರೈಲುಗಳು ಸಂಚರಿಸುತ್ತಿವೆ

Translate »