ಸೈನಿಕರ ಹೆಸರಿನಲ್ಲಿ ಕೊಡಗಿನಲ್ಲಿ ವಂಚನೆ
ಕೊಡಗು

ಸೈನಿಕರ ಹೆಸರಿನಲ್ಲಿ ಕೊಡಗಿನಲ್ಲಿ ವಂಚನೆ

February 28, 2020

ಮಡಿಕೇರಿ, ಫೆ.27- ಕೊಡಗು ಜಿಲ್ಲೆ ವೀರ ಸೇನಾನಿಗಳ ನಾಡು. ಹಲವು ಮೇಜರ್, ಜನರಲ್‍ಗಳನ್ನು ಭಾರತೀಯ ಸೇನೆಗೆ ನೀಡಿದ ಜಿಲ್ಲೆ. ದೇಶದ ಮೊದಲ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರನ್ನು ಸೇನೆಗೆ ಕೊಟ್ಟ ನಾಡು. ಹೀಗಾಗಿಯೇ ಇಂದಿಗೂ ಕೊಡಗು ಜಿಲ್ಲೆ ಹಾಗೂ ಸೇನೆಗೆ ಅವಿನಾಭಾವ ಸಂಬಂಧವಿದೆ. ಆದರೆ ಕಿಡಿಗೇಡಿಗಳು ಇದೇ ಗೌರವ ಭಾವನೆಯನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯ ರಿಗೆ ಮೋಸ ಮಾಡುವ ಮೂಲಕ ಸೇನೆಗೆ ಇರುವ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ.

ಮಡಿಕೇರಿ ನಗರದ ಗೌಳಿಬೀದಿಯಲ್ಲಿರುವ ಹೋಟೆಲ್ ಮಾಲೀಕರೊಬ್ಬರಿಗೆ ಕರೆ ಮಾಡಿದ ಖದೀಮನೊಬ್ಬ, ನಾನು ಸೇನಾಧಿಕಾರಿ ಜಿಲ್ಲೆಯಲ್ಲಿ ನಮ್ಮದೊಂದು ಕ್ಯಾಂಪ್ ಇದೆ. ಅಲ್ಲಿಗೆ 175 ಬಿರಿಯಾನಿ ಪಾರ್ಸಲ್ ಬೇಕು ಎಂದು ಆರ್ಡರ್ ಮಾಡಿದ್ದಾನೆ. ಹೋಟೆಲ್ ಮಾಲೀಕ ಚೇತನ್ `ಸರ್ ಅಡ್ವಾನ್ಸ್ ಅಮೌಂಟ್ ಹಾಕಬಹುದಾ ಎಂದು ಕೇಳಿದಾಗ, `ಇದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಹಣ ಕೊಡಲು ಆಗುವುದಿಲ್ಲ. ನಿಮ್ಮ ಮೊಬೈಲ್‍ಗೆ ಬಾರ್ ಕೋಡ್ ಕಳುಹಿಸುತ್ತೇನೆ. ಅದನ್ನು ನೀವು ಸ್ಕ್ಯಾನ್ ಮಾಡಿ ನಿಮ್ಮ ಅಕೌಂಟ್‍ಗೆ ಹಣ ಕ್ರೆಡಿಟ್ ಆಗುತ್ತೆ ಎಂದಿದ್ದಾನೆ.

ನಕಲಿ ಸೇನಾಧಿಕಾರಿ ಚೇತನ್ ಮೊಬೈಲ್‍ಗೆ ವಾಟ್ಸಪ್ ಮೂಲಕ ಬಾರ್ ಕೋಡ್ ಕಳುಹಿಸಿದ್ದನು. ಮೊಬೈಲ್‍ಗೆ ಬಂದ ವಾಟ್ಸಪ್ ಮೆಸೇಜ್ ನೋಡಿ ಚೇತನ್ ಖುಷಿಯಾಗಿ ದ್ದಾರೆ. ಅವರ ವಾಟ್ಸಾಪ್ ಡಿಪಿಯನ್ನು ನೋಡಿದಾಗ ಅದರಲ್ಲಿ ಆರ್ಮಿ ಆಫೀಸರ್ ಫೆÇೀಟೋ ಇರೋದನ್ನ ನೋಡಿ ಇವರು ಆರ್ಮಿಯವರೇ ಎಂದು ನಂಬಿದ್ದಾರೆ. ಅಲ್ಲದೇ ಕಳುಹಿಸಿದ್ದ ಬಾರ್ ಕೋಡನ್ನು ಸ್ಕ್ಯಾನ್ ಮಾಡಿದ್ದಾರೆ. ಆದರೆ ಚೇತನ್ ಖಾತೆಗೆ ಹಣ ಬರುವ ಬದಲಿಗೆ ಅವರ ಖಾತೆಯಿಂದಲೇ 3 ಸಾವಿರ ರೂ. ಹಣ ಕಡಿತಗೊಂಡಿದೆ. ತಕ್ಷಣ ಬಿರಿಯಾನಿ ಆರ್ಡರ್ ಬಂದಿದ್ದ ನಂಬರ್‍ಗೆ ಕರೆ ಮಾಡಿದಾಗ ಫೆÇೀನ್ ಸ್ವಿಚ್ ಆಫ್ ಆಗಿತ್ತು. ಹೀಗೆ ನಕಲಿ ಸೇನಾಧಿಕಾರಿಯನ್ನು ನಂಬಿ ಹೋಟೆಲ್ ಮಾಲೀಕ ಹಣ ಕಳೆದುಕೊಂಡಿದ್ದಾರೆ.

ನಕಲಿ ಸೇನಾಧಿಕಾರಿಗಳು, ನಕಲಿ ಸೈನಿಕರ ಹೆಸರಿನಲ್ಲಿ ವಂಚಿಸಿರುವುದು ಇದೊಂದೇ ಪ್ರಕರಣ ಅಲ್ಲ. ಈ ಹಿಂದೆ ಕೂಡ ಇಂತಹ ವಂಚನೆ ಪ್ರಕರಣಗಳು ನಡೆದಿವೆ. ಬ್ರಿಜೇಶ್ ಎಂಬುವರಿಗೂ ಇಂತಹದ್ದೇ ಅನುಭವವಾಗಿದೆ. ಸ್ಕಾರ್ಪಿಯೋ ಕಾರೊಂದನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡಿಸ್ತೇನೆ ಅಂತ ಸೈನಿಕನ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಮೋಸ ಮಾಡಲು ಮುಂದಾಗಿದ್ದನು.

ಬೆಂಗಳೂರಿನ ಆರ್ಮಿ ಕ್ಯಾಂಪ್‍ನಲ್ಲಿ ಕಾರುಗಳಿವೆ. ನೀವು ಬೇಕೆಂದರೆ ಹೊಸ ಮಾಡೆಲ್‍ಗಳನ್ನು ಕೇವಲ 75 ಸಾವಿರಕ್ಕೆ ಕೊಡಿಸ್ತೇನೆ. ಆದರೆ ಕಾರು ನೋಡ್ಬೇಕು ಎಂದ್ರೆ ನಾನು ವಾಟ್ಸಪ್ ಮೂಲಕ ಫೆÇೀಟೋ ಕಳುಹಿಸಿಕೊಡ್ತೇನೆ. ನೀವು ಮೊದಲು ಖಾತೆಗೆ ಹಣಹಾಕಿ, ನಂತರ ನಾವು ನಿಮಗೆ ಮಂಗಳೂರಿಗೆ ಕಾರು ಡೆಲಿವರಿ ಕೊಡ್ತೇವೆ ಎಂದು ನಕಲಿ ಸೈನಿಕ ಬ್ರಿಜೇಶ್‍ಗೆ ಕರೆ ಮಾಡಿದ್ದನು. ಆತನ ಬಳಿ ಮಾತನಾಡಿದ ಬಳಿಕ ಬ್ರಿಜೇಶ್ ಅವರಿಗೆ ಅನುಮಾನ ಬಂದು ಕಾರು ವ್ಯಾಪಾರವನ್ನು ಅಷ್ಟಕ್ಕೆ ನಿಲ್ಲಿಸಿದ್ದರು. ಹೀಗೆ ಕೊಡಗಿನ ಜನತೆಗೆ ಸೇನೆ ಮೇಲೆ ಇರುವ ಗೌರವ, ನಂಬಿಕೆಯನ್ನು ದುರ್ಬಳಿಕೆ ಮಾಡಿಕೊಂಡು ನಕಲಿ ಸೇನಾಧಿಕಾರಿಗಳ ಜಾಲವೊಂದು ಮೋಸ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಈ ರೀತಿ ವಂಚಕರ ಜಾಲವನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Translate »