ನಾಳೆ ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ
ಮೈಸೂರು

ನಾಳೆ ಸೀಳು ತುಟಿ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ

June 28, 2018

ಮೈಸೂರು:  ಲವ್ ವಿತೌಟ್ ರೀಸನ್ ಫೌಂಡೇಶನ್ ವತಿಯಿಂದ ಜೂ.29ರಂದು ನಾಚನಹಳ್ಳಿಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೀಳುತುಟಿ ಸಮಸ್ಯೆಯ ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಚಾಲಕ ಯು.ಧನಂಜಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ ಎಂದು ಹೇಳಿದರು.

ಸೀಳುತುಟಿ, ಸೀಳು ಅಂಗಳ ಮತ್ತು ಮುಖದ ವಿಕಲಾಂಗತೆ ಸಮಸ್ಯೆ ಇರುವ ಮಕ್ಕಳು ಮಾತ್ರವಲ್ಲದೆ, ಇದೇ ರೀತಿ ಸಮಸ್ಯೆ ಹೊಂದಿರುವ ವಯಸ್ಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಶಸ್ತ್ರಚಿಕಿತ್ಸೆಯ ಅಗತ್ಯತೆ ಕಂಡು ಬಂದಲ್ಲಿ ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಇದಕ್ಕಾಗಿ ತಪಾಸಣೆ ವೇಳೆ ದಿನಾಂಕವೊಂದನ್ನು ನೀಡಲಾಗುವುದು. ಆ ದಿನದಂದು ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ ಎಂದು ವಿವರಿಸಿದರು.

ಬೆಂಗಳೂರು ಮೂಲದ ಸಂತೋಷನ್ ಮ್ಯಾಥಿವ್ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಇವರು ಫೌಂಡೇಶನ್‍ನ ಸಂಸ್ಥಾಪಕರಾಗಿದ್ದಾರೆ. ಇವರ ಮಗುವಿಗೆ ಸೀಳುತುಟಿ ಸಮಸ್ಯೆ ಎದುರಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಸಮಸ್ಯೆ ನಿವಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಮಕ್ಕಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಈ ಫೌಂಡೇಶನ್ ಸ್ಥಾಪಿಸಿದರು. ಶಿಬಿರಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಮೊ.ಸಂ. 9738820462, 9591938844 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

Translate »